ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕ್ಕಳಿಗೆ ಇರುವುದೊಂದೇ ಬಾಲ್ಯ, ಯಾವುದೇ ಕಾರಣಕ್ಕೂ ಅವರ ಬಾಲ್ಯವನ್ನು ಬಲಿಕೊಡದಿರೋಣ ಎಂದು ಶಾಂತಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಕೋಡಿರಂಗಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾನಿಕೇತನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಆಯಾ ದೇಶದ ಭವಿಷ್ಯವಾಗಿದ್ದಾರೆ. ಅವರು ಹಿರಿಯರ ಪ್ರೀತಿ, ಅಕ್ಕರೆ, ಆರೈಕೆ ಹಾಗೂ ಉತ್ತಮ ಶಿಕ್ಷಣ ಪಡೆಯುವ ಹಕ್ಕುಳ್ಳವರಾಗಿರುತ್ತಾರೆ ಎಂದರು.
ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಅವರಿಗೆ ಮಕ್ಕಳ ಬಗ್ಗೆ ಅಪಾರ ಅಕ್ಕರೆ ಹಾಗೂ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದು ಮಕ್ಕಳ ಶಿಕ್ಷಣ, ಆರೈಕೆ, ಆರೋಗ್ಯ, ಕ್ರೀಡೆಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರು ಎಂದರು.ನಾನು ದೇಶದಲ್ಲಿ ಗುಡಿ, ಚರ್ಚು, ಮಸೀದಿಗಳನ್ನು ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಶಾಲೆಗಳು, ಕೈಗಾರಿಕೆಗಳು ಮತ್ತು ಜಲಾಶಯಗಳನ್ನು ನಿರ್ಮಿಸಲು ಇಚ್ಚಿಸುತ್ತೇನೆ. ಭಾರತದ ಭವಿಷ್ಯ ನೋಡುವಾಗ ಗ್ರಹ, ತಾರೆ, ಪಂಚಾಂಗಗಳನ್ನು ನೋಡುವುದಿಲ್ಲ, ಬದಲಾಗಿ ಮುದ್ದು ಮಕ್ಕಳ ಮುಖಗಳನ್ನು ನೋಡುತ್ತೇನೆ. ಮಕ್ಕಳ ಮುಖದಲ್ಲಿ ನಗುವಿದ್ದರೆ, ಕಣ್ಣುಗಳಲ್ಲಿ ಕಾಂತಿ ಇದ್ದರೆ ಭಾರತಕ್ಕೆ ಭವಿಷ್ಯವಿರುತ್ತದೆ ಎಂಬ ದೂರದೃಷ್ಟಿಯನ್ನು ನೆಹರು ಹೊಂದಿದ್ದರು ಎಂದರು.
ದೇವರು ಮನುಷ್ಯನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ ಎಂಬುದನ್ನು ಪ್ರತಿಯೊಂದು ಮನೆಯಲ್ಲಿ ಮಕ್ಕಳ ಜನನದಿಂದ ದೇವರು ಋಜುವಾತುಪಡಿಸಿದ್ದಾನೆ ಎಂದು ರವೀಂದ್ರನಾಥ ಟಾಗೂರ್ ಹೇಳಿದ್ದಾರೆ. ಶಿಕ್ಷಕರು, ಪಾಲಕರು, ಸಮಾಜ ಹಾಗೂ ಮಾಧ್ಯಮಗಳು ಮಕ್ಕಳ ಶ್ರೇಯಸ್ಸಿಗಾಗಿ ನಿಲ್ಲಬೇಕು. ಪ್ರತಿ ಶಾಲೆ, ಪ್ರತಿ ಶಿಕ್ಷಕ ಹಾಗೂ ತಾಯಿ ತಂದೆ ಮಕ್ಕಳನ್ನು ನಾಳಿನ ಸಂಪತ್ತನ್ನಾಗಿ ಭಾವಿಸಿ ಬೆಳೆಸಬೇಕು ಎಂದರು.ಶಾಂತಾ ಫಾರ್ಮಸಿ ಕಾಲೇಜಿನ ಡಾ. ಗೋಪಿನಾಥ್ ಮಾತನಾಡಿ, ಶಿಕ್ಷಕರು, ಪಾಲಕರು ಯಾವುದೇ ಸಂದರ್ಭದಲ್ಲಿ ಮಕ್ಕಳನ್ನು ನೋಯಿಸಬಾರದು, ಅವರ ಮಾತು ಆಲಿಸಿ ಅವರನ್ನು ಬೆಳೆಸಬೇಕು ಎಂದರು.
ಮಕ್ಕಳ ದಿನದ ಆಚರಣೆಯಲ್ಲಿ ಶಿಕ್ಷಕ ಸಮುದಾಯ ಮಕ್ಕಳ ಮುಂದೆ ಮಕ್ಕಳಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ ನಡೆಸಿಕೊಡಲಾಯಿತು.ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಕಲ್ಯಾಣಿ, ಆಡಳಿತಾಧಿಕಾರಿ ಕೆನೆತ್, ಅಧ್ಯಾಪಕರಾದ ಖಲೀಂಉಲ್ಲಾ, ರಂಗರಾಜನ್, ಲವಕುಮಾರ್, ಶಿವು, ಸಂದೇಶ್, ರಾಜೇಶ್, ಅಂಬಿಕ, ಸುಜಯ, ವೆಂಕಟೇಶ್ , ರಾಧ, ಆಸ್ವಿನಿ, ಮೀನಾಜ್, ಶಕ್ತಿರಾಧಾ, ಶರವಣ ಉಪಸ್ಥಿತರಿದ್ದರು. ಸಿಕೆಬಿ-1
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾನಿಕೇತನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ದಿನಾಚರಣೆ ಕಾರ್ಯಕ್ರಮನ್ನು ಡಾ. ಕೋಡಿರಂಗಪ್ಪ ಉಧ್ಘಾಟಿಸಿದರು.