ಮಂಗಳೂರು: ‘ಸಹಕಾರ ರತ್ನ’ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ 95 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಇತಿಹಾಸ ಹೊಂದಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.ಮಂಗಳೂರಿನ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಂದ ಎಸ್‌ಸಿಡಿಸಿಸಿ ಬ್ಯಾಂಕ್ ನಿರೀಕ್ಷಕ ಎಸ್.ಜಗದೀಶ್ಚಂದ್ರ ಅಂಚನ್ ಸಂಘದ ಅಧ್ಯಕ್ಷ ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಉತ್ತಮ ನಾಯಕತ್ವದಲ್ಲಿ, ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದ ಅವಿರತ ಪರಿಶ್ರಮದಿಂದ ಸಂಘ ನಿರಂತರ ಲಾಭದೊಂದಿಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಹಕಾರಿ ನೌಕರರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಸಂಘ ತನ್ನ ಸದಸ್ಯರಿಗೆ ಗುಣಮಟ್ಟದ ಸೇವೆ ಒದಗಿಸುವ ಮೂಲಕ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ.
ಸಂಘದ ನಿರಂತರ ಸಾಧನೆ, ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಸದಸ್ಯರಿಗೆ ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸಾಧನಾ ಪ್ರಶಸ್ತಿ’ಯನ್ನು 2017-18ರಿಂದ 2025-26ನೇ ಸಾಲಿನವರೆಗೆ ಸತತ ಒಂಬತ್ತು ವರ್ಷಗಳ ಕಾಲ ಪಡೆದುಕೊಂಡಿರುವುದು ಸಂಘದ ಹೆಗ್ಗಳಿಕೆಯಾಗಿದೆ.ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂಘದ ಸಂಘಟಿತ ಪ್ರಯತ್ನ, ಸಮರ್ಥ ಆಡಳಿತ ಹಾಗೂ ಒಗ್ಗಟ್ಟಿನ ಕಾರ್ಯನಿರ್ವಹಣೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ. ಈ ಪ್ರಶಸ್ತಿಯು ಸಂಘದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಹೊಸ ಹುರುಪು ಮತ್ತು ಪ್ರೇರಣೆ ನೀಡಿದೆ.