ಸೂಳೆಕೆರೆ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಡಾ.ಪ್ರಭಾ ಕರೆ

KannadaprabhaNewsNetwork |  
Published : Oct 27, 2024, 02:10 AM IST
26ಕೆಡಿವಿಜಿ3-ದಾವಣಗೆರೆಯ ಶಿವ ಪಾರ್ವತಿಯಲ್ಲಿ ಸೂಳೆಕೆರೆಯ ಕುರಿತಂತೆ ಯುವ ಸಾಹಿತಿ ಪಾಪು ಗುರು ರಚಿಸುತ್ತಿರುವ ಶಾಂತಾದೇವಿ ಕಾದಂಬರಿಯ ಮುಖಪುಟ ಅನಾವರಣಗೊಳಿಸಿ, ಶುಭಾರೈಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. | Kannada Prabha

ಸಾರಾಂಶ

ದಾವಣಗೆರೆಯ ಶಿವ ಪಾರ್ವತಿಯಲ್ಲಿ ಸೂಳೆಕೆರೆಯ ಕುರಿತಂತೆ ಯುವ ಸಾಹಿತಿ ಪಾಪುಗುರು ರಚಿಸುತ್ತಿರುವ ಶಾಂತಾದೇವಿ ಕಾದಂಬರಿಯ ಮುಖಪುಟವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಐತಿಹಾಸಿಕ ಸೂಳೆಕೆರೆ ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದು, ಇಂತಹ ಕೆರೆಯ ಬಗ್ಗೆ ಹಲವಾರು ಐತಿಹ್ಯ ಕಥೆಗಳ ಮಧ್ಯೆ ಒಂದು ಸಂಶೋಧನಾತ್ಮಕ ಕೃತಿಯಾಗಿ ಶಾಂತಾದೇವಿ ಕಾದಂಬರಿ ಸೂಳೆಕೆರೆ ಇತಿಹಾಸದ ಮೇಲೆ ಮತ್ತಷ್ಟು ಬೆಳಕು ಚೆಲ್ಲಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಶನಿವಾರ ಯುವ ಸಾಹಿತಿ, ಪತ್ರಕರ್ತ ಪಾಪು ಗುರು ರಚಿಸಿರುವ ಉಷಾ ಪ್ರಕಾಶನದಿಂದ ಹೊರ ಬರುತ್ತಿರುವ ಸೂಳೆಕೆರೆಯ ಐತಿಹಾಸಿಕ ಕಾದಂಬರಿ ಶಾಂತಾದೇವಿ ಮುಖಪುಟ ಅನಾವರಣಗೊಳಿಸಿ ಮಾತನಾಡಿದ ಅವರು, ಐತಿಹಾಸಿಕ ಕಾದಂಬರಿಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ಜಿಲ್ಲೆಯ ಸಾಂಸ್ಕೃತಿಕ ಪ್ರತಿಷ್ಟೆಯೂ ಆಗಿದೆ. ಶಾಂತಾದೇವಿ ಕಾದಂಬರಿ ನಮ್ಮ ಜಿಲ್ಲೆಯ ಹೆಮ್ಮೆಯ ಕೆರೆಯ ಇತಿಹಾಸದ ಬಗ್ಗೆ ಮತ್ತಷ್ಟು ತಿಳಿಸಲಿದೆ ಎಂದು ನುಡಿದರು.

ಶತ ಶತಮಾನಗಳಿಂದಲೂ ಸೂಳೆಕೆರೆ ಚನ್ನಗಿರಿ ತಾಲೂಕಿನ ನೂರಾರು ಗ್ರಾಮಗಳಿಗೆ, ಲಕ್ಷಾಂತರ ಜನರ ಬದುಕನ್ನು ಕಟ್ಟಿಕೊಟ್ಟಿದೆ. ನೀರಾವರಿ ಜೊತೆಗೆ ಕುಡಿಯುವ ನೀರಿಗೂ ಆಸರೆಯಾಗಿದೆ. ಕೆರೆ ನಿರ್ಮಾಣವಾದಾಗ ನಿರ್ಮಿಸಿದ್ದ ಬಸವ ನಾಲಾ ಮತ್ತು ಸಿದ್ಧ ನಾಲೆಗಳು ಇಂದಿಗೂ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೆಂದರೆ ಅಂದಿನ ಜನರ ಕೌಶಲ್ಯವು ಗಮನ ಸೆಳೆಯುತ್ತದೆ ಎಂದರು.ಮಾನವ ನಿರ್ಮಿತ ಸೂಳೆಕೆರೆ ಕುರಿತ ಒಂದು ಸಂಶೋಧನಾ ಕೃತಿಯ ಅಗತ್ಯತೆಯನ್ನು ಕಟ್ಟಿಕೊಡುವ ಕೆಲಸ ಪಾಪು ಗುರು ಇತರರು ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಅವರು ಶ್ಲಾಘಿಸಿದರು.

ನಗರವಾಣಿ ಸಹ ಸಂಪಾದಕ, ಹಿರಿಯ ಸಾಹಿತಿ ಬಿ.ಎನ್.ಮಲ್ಲೇಶ ಮಾತನಾಡಿ, ಏಷ್ಯಾದ ದೊಡ್ಡ ಕೆರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯ ಸೂಳೆಕೆರೆಯ ಐತಿಹಾಸಿಕವಾಗಿ ಮಹತ್ವ ಪಡೆದಿದೆ. ಸಾಹಿತ್ಯದ ಪ್ರಕಾರದಲ್ಲಿ ಕಾದಂಬರಿ ರಚನೆಯೂ ಸುದೀರ್ಘ ಕೆಲಸವಾಗಿದೆ. ಅದರಲ್ಲೂ ಐತಿಹಾಸಿಕ ಕಾದಂಬರಿಗಳು ಆ ಪ್ರದೇಶದ ನೆಲ, ಜಲ, ಸಂಸ್ಕೃತಿ, ಜೀವನ ಪದ್ಧತಿ, ಆರ್ಥಿಕತೆ, ಆಮದು, ರಫ್ತು, ಉತ್ಪಾದನೆ ಈ ಎಲ್ಲಾ ಮೂಲಗಳನ್ನು ಕಟ್ಟಿಕೊಡುವ ಮೂಲಕ ಆ ಪ್ರದೇಶದ ಸಂಸ್ಕೃತಿ ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ ಎಂದು ತಿಳಿಸಿದರು.

ಕೃತಿಯ ಕರ್ತೃ ಪಾಪುಗುರು ಮಾತನಾಡಿ, ಶಾಂತಾದೇವಿ ಕಾದಂಬರಿಯ ರಚನೆಗೆ ಸೂಳೆಕೆರೆ ನಿರ್ಮಾಣ, ಸ್ಥಳ ಪುರಾಣ, ಜಾಗದ ಅನ್ವೇಷಣೆ, ಜನಸಂಪರ್ಕ ಮಾಡಿ ಸುದೀರ್ಘ ಸಮಯ ವ್ಯಯ ಮಾಡಿ ಕೃತಿ ರಚನೆಗೆ ಕೈ ಹಾಕಿದ್ದೇನೆ. ಕಳೆದ ಮೂರೂವರೆ ವರ್ಷದ ಪ್ರಯತ್ನ ಇದಾಗಿದೆ. ಸಾಕಷ್ಟು ಅಧ್ಯಯನದ ನಂತರ ಹೊರ ಬರುತ್ತಿರುವ ಶಾಂತಾದೇವಿ ಕಾದಂಬರಿ ಸೂಳೆಕೆರೆ ನಿರ್ಮಾಣದ ಬಗ್ಗೆ ಒಂದು ಸಂಪೂರ್ಣ ಚಿತ್ರಣ ಓದುಗರಿಗೆ ಕಟ್ಟಿಕೊಡಲಿದೆ ಎಂದರು.

ಈ ಸಂದರ್ಭದಲ್ಲಿ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಪ್ರತಿಕೆಯ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್, ಹಿರಿಯ ಸಾಹಿತಿಗಳಾದ ಸಂತೇಬೆನ್ನೂರು ಫೈಜ್ನಟ್ರಾಜ್, ಸುಬ್ರಹ್ಮಣ್ಯ ಭದ್ರಾವತಿ, ಸನಾವುಲ್ಲಾ ನವಿಲೇಹಾಳ್, ಫಕೀರೇಶ ಆದಾಪುರ, ಮೊಹಮ್ಮದ್ ರಫೀ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು