ಪ್ರವಾಹ ಸ್ಥಿತಿ ಹಿನ್ನೆಲೆ ಮುನ್ನೆಚ್ಚರಿಕೆಗೆ ಡಾ.ಪ್ರಭಾ ಸೂಚನೆ

KannadaprabhaNewsNetwork |  
Published : Aug 02, 2024, 01:03 AM IST
31ಕೆಡಿವಿಜಿ18-ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. | Kannada Prabha

ಸಾರಾಂಶ

ಪ್ರವಾಹ ಬಂದಾಗಲೆಲ್ಲಾ ಸಮಸ್ಯೆ ಅನಾವರಣಗೊಳ್ಳುತ್ತವೆ. ಗದ್ದೆಗಳಿಗೆ, ಬೆಳೆಗಳು, ತೋಟಗಳು, ವಸತಿ ಪ್ರದೇಶಗಳು ಜಲಾವೃತವಾಗುತ್ತದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ವ್ಯಾಪಕ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಬಿಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣದ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ನವದೆಹಲಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ತಾವು ಪಾಲ್ಗೊಂಡಿದ್ದು, ದಾವಣಗೆರೆಗೆ ಮರಳಿದ ನಂತರ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ನದಿ ಪಾತ್ರದ ಜನರನ್ನು ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹರಿಹರ, ಹೊನ್ನಾಳಿ ತಾಲೂಕಿನ ನದಿ ಪಾತ್ರದಲ್ಲಿ ನೆರೆ ಹೆಚ್ಚಾಗಿದೆ. ತುಂಗಾ ಜಲಾಶಯದಿಂದಲೂ ಅಪಾರ ನೀರು ಹೊರ ಬಿಡಲಾಗುತ್ತಿದೆ. ಅದೇ ರೀತಿ ಭದ್ರಾದಿಂದಲೂ ಭಾರೀ ನೀರು ಬರುತ್ತಿದೆ. ಇದರಿಂದ ನದಿ ಹರಿವು ಹೆಚ್ಚಾಗಿದ್ದು, ಸುಮಾರು 40 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ಕ್ರಸ್ಟ್ ಗೇಟ್‌ ಮೂಲಕ ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿಗೆ ಸೂಚನೆ ನೀಡಿದ್ದಾರೆ.

ಪ್ರವಾಹ ಬಂದಾಗಲೆಲ್ಲಾ ಸಮಸ್ಯೆ ಅನಾವರಣಗೊಳ್ಳುತ್ತವೆ. ಗದ್ದೆಗಳಿಗೆ, ಬೆಳೆಗಳು, ತೋಟಗಳು, ವಸತಿ ಪ್ರದೇಶಗಳು ಜಲಾವೃತವಾಗುತ್ತದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುತ್ತದೆ. ಇದಕ್ಕೆಲ್ಲಾ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಸಂತ್ರಸ್ತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗಬಾರದು ಎಂದು ಹೇಳಿದ್ದಾರೆ. ಜನರು ಸಮಸ್ಯೆಯೆಂದು ಹೇಳಿಕೊಂಡು ಬರದಂತೆ ಅಧಿಕಾರಿಗಳು ಪರಿಣಾಮಕಾರಿಯಾಗಿ, ಬದ್ಧತೆಯಿಂದ ಕೆಲಸ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳಿಂದ ಯಾರೇ ಕರೆ ಮಾಡಿದರೂ ಕರೆ ಸ್ವೀಕರಿಸಬೇಕು. ಕಷ್ಟಗಳಿಗೆ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸುವುದಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನವರು ಸಭೆ ಮಾಡಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನರೊಟ್ಟಿಗೆ ಅಧಿಕಾರಿಗಳೂ ಇರಬೇಕು. ಇಂತಹ ಸಮಯದಲ್ಲಿ ಸಂತ್ರಸ್ತರು ಸುರಕ್ಷಿತ ಸ್ಥಳದಲ್ಲಿರಬೇಕು ಎಂದು ತಿಳಿಸಿದ್ದಾರೆ.

ಮಲೆನಾಡು, ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ಜುಲೈ ಅಂತ್ಯದೊಳಗೆ ಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯದ ನೀರಿನ ಮಟ್ಟ 184.6 ಅಡಿ ತಲುಪಿದೆ. 61 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ಒಳಹರಿವಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಾಗಲಿದೆ. ಈ ಕಾರಣ ಅಧಿಕಾರಿಗಳು ಈಗಿನಿಂದಲೇ ಸನ್ನದ್ಧರಾಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚನೆ ನೀಡಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ