ದ.ರಾ.ಬೇಂದ್ರ ಕಾವ್ಯ ಜನಮನ್ನಣೆ

KannadaprabhaNewsNetwork | Published : Aug 11, 2024 1:32 AM

ಸಾರಾಂಶ

ಬ್ರಿಟೀಷ ವಸಾಹತುಶಾಹಿ ವಿರುದ್ಧ ಪದ್ಯ ಬರೆದ ಕಾರಣ ಜೈಲು ವಾಸ ಅನುಭವಿಸಿದರು

ಮುಂಡರಗಿ: ಬದುಕಿನೂದ್ದಕ್ಕೂ ಹಲವು ಏರಿಳಿತ ಕಂಡ ಕವಿ ಡಾ. ದ.ರಾ.ಬೇಂದ್ರೆಯವರಿಗೆ ಅನುಭಾವಿ ಕವಿ ಅರವಿಂದರ ಸಂಪರ್ಕವಿತ್ತು. ಜನಪದರ ಒಳಮಿಡಿತ ಹಾಗೂ ಭಾಷೆಯ ಸೊಗಡಿನ ಒಡನಾಟವಿತ್ತು. ವೇದೋಪನಿಷತ್ತುಗಳ ಅಧ್ಯಯನವಿತ್ತು. ಹಾಗಾಗಿ ಅವರ ಕಾವ್ಯ ಜನಮನ್ನಣೆ ಪಡೆಯಿತು ಎಂದು ಮಕ್ಕಳ‍ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ನಿಂಗು ಸೊಲಗಿ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ನಾಗರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಂಭ್ರಮ-50ರ ಅಡಿಯಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ಡಾ. ದ.ರಾ. ಬೇಂದ್ರೆಯವರ ಬದುಕು ಬರಹದ ಕುರಿತು ಮಾತನಾಡಿದರು.

ದ‌.ರಾ. ಬೇಂದ್ರೆಯವರು ಬದುಕಿನ ಪ್ರತಿ ಕ್ಷಣ ಭಾವನಾತ್ಮಕ ನೆಲೆಯಲ್ಲಿ ಅನುಭವಿಸಿ ಸೃಜನಾತ್ಮಕ ಅಭಿವ್ಯಕ್ತಿಯಾಗಿ ಕವಿತೆ ಬರೆಯುತ್ತ ಯುಗದ ಕವಿಯಾಗಿ ಹೆಸರಾದವರು. ಬೇಂದ್ರೆಯವರ ಕಾವ್ಯದಲ್ಲಿ ನಾದವಿದೆ. ಜೀವ ಭಾವದ ಮಿಡಿತವಿದೆ. ಜತೆಗೆ ಪ್ರತಿಭಟನೆಯ ಧ್ವನಿಯೂ ಇದೆ.ಅವರು ಹಲವು ಕಷ್ಟ ಮೆಟ್ಟಿ ಬೆಳೆದವರು. ಬ್ರಿಟೀಷ ವಸಾಹತುಶಾಹಿ ವಿರುದ್ಧ ಪದ್ಯ ಬರೆದ ಕಾರಣ ಜೈಲು ವಾಸ ಅನುಭವಿಸಿದರು.ಹಲವು ವರ್ಷಗಳ ಕಾಲ ನಜರಬಂಧಿಯಲ್ಲಿ ಕಾಲ ಕಳೆಯಬೇಕಾಯಿತು. ಕವಿ, ನಾಟಕಕಾರ, ಕತೆಗಾರರಾಗಿ, ಅನುವಾದಕರಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ವರಕವಿ ಬೇಂದ್ರೆಯವರಿಗೆ ಜ್ಞಾನಪೀಠ ಒಲಿದು ಬಂತು ಎಂದು ಅವರು, ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು, ನೀ ಹೀಂಗ ನೋಡಬ್ಯಾಡ ನನ್ನ, ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಮೊದಲಾದ ಗೀತೆಗಳನ್ನು ಸಂದರ್ಭೋಚಿತವಾಗಿ ಹಾಡುತ್ತ ಮಕ್ಕಳ ಮನದಲ್ಲಿ ಬೇಂದ್ರೆ ಕವಿತೆಗಳ ಭಾವವನ್ನು ಡಾ ನಿಂಗು ಬಿತ್ತಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಕರ್ನಾಟಕ ಏಕೀಕರಣದಲ್ಲಿ ಹೋರಾಡಿದ ಮಹನೀಯರನ್ನು ಹಾಗೂ ಕಲೆ ಸಾಹಿತ್ಯ ಸಂಸ್ಕೃತಿಗಾಗಿ ಹೋರಾಡಿ ಈ ನಾಡಿಗೆ ಮಹತ್ತರವಾದ ಕೊಡುಗೆ ನೀಡಿದ ಮಹನೀಯರ ಜೀವನ ಚರಿತ್ರೆ ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡುತ್ತಾ ಬಂದಿದ್ದೇವೆ ಎಂದರು.

ಪರಸಪ್ಪ ಹಳ್ಳಿಕೇರಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಶಸಾಪ ಅಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ, ಸುರೇಶ ಭಾವಿಹಳ್ಳಿ, ಕೃಷ್ಣ ಸಾಹುಕಾರ, ಲಿಂಗರಾಜ ಡಾವಣಗೇರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜಾಫರಸಾಬ್ ಅಡವಿಸೋಮಾಪೂರ, ಎಸ್.ಬಿ. ಗದಗ, ಅನ್ನೇಶಿ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್.ಸಿ. ಹರ್ತಿ ಸ್ವಾಗತಿಸಿದರು. ಎಂ.ಎಸ್.ಶೀರನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪಾರ್ವತಿ ಉಳ್ಳಾಗಡ್ಡಿ ನಿರೂಪಿಸಿ, ಶಿಕ್ಷಕಿ ಉಮಾ ಶಿರಸಗಿ ವಂದಿಸಿದರು.

Share this article