ಡಾ.ರಾಜ್ ಈ ನೆಲದ ಸಾಂಸ್ಕೃತಿಕ ನಾಯಕ

KannadaprabhaNewsNetwork | Published : Apr 24, 2025 11:45 PM

ಸಾರಾಂಶ

ವರನಟ ಡಾ.ರಾಜ್‌ಕುಮಾರ್‌ ಅವರು ಈ ನಾಡಿನ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕ. ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡುವ ದಿನ

ಕನ್ನಡಪ್ರಭ ವಾರ್ತೆ, ತುಮಕೂರು ವರನಟ ಡಾ.ರಾಜ್‌ಕುಮಾರ್‌ ಅವರು ಈ ನಾಡಿನ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕ. ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡುವ ದಿನವಾಗಿ ಅವರ ಜನ್ಮದಿನವನ್ನು ಕನ್ನಡಿಗರು ಆಚರಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಗುರುವಾರ ನಗರದ ಹೊರಪೇಟೆ ರಸ್ತೆಯ ಡಾ.ರಾಜ್‌ಕುಮಾರ್ ಹೋಟೆಲ್‌ಎಂದೇ ಹೆಸರಾದ ಹರಳೂರು ಶಿವಕುಮಾರ್ ಹೋಟೆಲ್ ಬಳಗದಿಂದ ನಡೆದ ಡಾ.ರಾಜ್‌ಕುಮಾರ್‌ ಅವರ 97ನೇ ಹುಟ್ಟುಹಬ್ಬದ ಅಂಗವಾಗಿ ಡಾ.ರಾಜ್‌ಅವರ ಬೆಳ್ಳಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಹರಳೂರು ಶಿವಕುಮಾರ್ ಅವರು ಡಾ.ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದರು. ಅವರು ನಿಧನರಾದ ನಂತರ ಶಿವಕುಮಾರ್ ಅವರ ಪುತ್ರ ಮನು ಅವರು ಆ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು. ಡಾ.ರಾಜ್‌ಕುಮಾರ್ ಕೇವಲ ಕಲಾವಿದ ಮಾತ್ರ ಆಗದೆ ಈ ನಾಡಿನ ಶ್ರೇಷ್ಠ ಆದರ್ಶ ವ್ಯಕ್ತಿಯಾಗಿ ಮಾದರಿಯಾಗಿದ್ದಾರೆ.ಅವರ ಸಿನಿಮಾಗಳೂ ಸಮಾಜಕ್ಕೆಉತ್ತಮ ಸಂದೇಶ ನೀಡಿ ಸಾಮಾಜಿಕ ಪರಿವರ್ತನೆಗೂ ಕಾರಣವಾಗಿವೆ. ಗೋಕಾಕ್ ಚಳವಳಿಯ ಮುಂಚೂಣಿ ನಾಯಕರಾಗಿ ಡಾ.ರಾಜ್‌ಕುಮಾರ್ ಭಾಗವಹಿಸಿ ನಾಡಿನ ರಕ್ಷಣೆಗೆ ಮುಂದಾಗಿದ್ದರು.ಅವರು ತಮ್ಮ ನಟನಾ ವೃತ್ತಿಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ದೊಡ್ಡಕೊಡುಗೆ ನೀಡಿದ್ದರು ಎಂದು ಹೇಳಿದರು.ಡಾ. ರಾಜ್‌ ಕೇವಲ ನಟರಾಗಿರಲಿಲ್ಲ ಅವರೊಬ್ಬ ಅಪ್ಪಟ ಸ್ವಾಭಿಮಾನಿ ಕನ್ನಡಿಗರು ಆಗಿದ್ದರು. ಅವರ ಕಾಲದಲ್ಲಿ ಬೇರೆ ಎಲ್ಲ ಭಾಷೆಗಳಲ್ಲಿ ಅವರಿಗೆ ಆಹ್ವಾನ ಬಂದರೂ ಸಹ ಅವರು ಕನ್ನಡವನ್ನು ಬಿಟ್ಟು ಬೇರೆ ಕಡೆ ಮುಖ ಮಾಡಲಿಲ್ಲ. ಅವರ ಚಲನಚಿತ್ರಗಳಲ್ಲಿ ಹಳೇಗನ್ನಡದಿಂದ ಹಿಡಿದು ಆಧುನಿಕ ಕಾವ್ಯದ ವರೆಗೂ ಸಾಕಷ್ಟು ಹೊಸ ಪ್ರದ ಪ್ರಯೋಗ ಸೇರಿದಂತೆ ಅನೇಕ ಹೊಸ ವಿಷಯಗಳು ಜನರನ್ನು ತಲುಪಿದವು. ಜೀವನಚೈತ್ರ ಚಲನಚಿತ್ರದಿಂದಾಗಿ ಸಾಕಷ್ಟು ಗ್ರಾಮಗಳಲ್ಲಿ ಮಹಿಳೆಯರೇ ನಿಂತು ಸಾರಾಯಿ ಅಂಗಡಿ ಬಂದ್‌ ಮಾಡಿಸಿ ಗ್ರಾಮದ ನೆಮ್ಮದಿಗೆ ಕಾರಣವಾಗಿದ್ದು ಅವರ ಚಿತ್ರಗಳಿಗೆ ಇದ್ದ ಗೌರವ ಶಕ್ತಿಯನ್ನು ತೋರಿಸಿದೆ ಎಂದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್‌ ಅವರು ಶ್ರೇಷ್ಠ ಕಲಾವಿದ ಅವರು ಅಭಿನಯಿಸಿದ್ದ ಪೌರಾಣಿಕ ಪಾತ್ರಗಳನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಅಭಿನಯಿಸುವ ಕಲಾವಿದ ಇನ್ನೊಬ್ಬರಿಲ್ಲ. ಇಂತಹ ಮಹಾನ್‌ ಕಲಾವಿದ, ಮಾನವೀಯ ವ್ಯಕ್ತಿ ಪಡೆದದ್ದು ನಮ್ಮೆಲ್ಲರ ಭಾಗ್ಯ. ಡಾ.ರಾಜ್‌ಕುಮಾರ್‌ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಕೃಷಿಯ ಮಹತ್ವ ತಿಳಿದು ಅನೇಕ ಯುವಕರು ಕೃಷಿಗೆ ಮರಳಲು ಸಿನಿಮಾ ಪ್ರೇರಣೆಯಾಗಿತ್ತು.ಇಂತಹ ಹಲವಾರು ಪರಿವರ್ತನೆಗಳಿಗೆ ಡಾ.ರಾಜ್ ಚಿತ್ರಗಳ ಪಾತ್ರಗಳು ಕಾರಣವಾಗಿವೆ ಎಂದರು.ಮುಖಂಡ ಬಂಬೂ ಮೋಹನ್‌ ಅವರು, ಡಾ.ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರ ಕೇವಲ ಸಾಂಕೇತಿಕವಾಗಿ ಆಚರಿಸದೆ, ನಾಡಿನಲ್ಲಿ ಸಾಂಸ್ಕೃತಿಕ ಹಬ್ಬವಾಗಿ ಆಚರಣೆ ಮಾಡಬೇಕು ಎಂದರು.ಮನು ಹರಳೂರು ಮಾತನಾಡಿ, ನಮ್ಮಕುಟುಂಬದ ಎಲ್ಲರೂ ಡಾ.ರಾಜ್‌ಕುಮಾರ್ ಅಭಿಮಾನಿಗಳೇ ಇಂದು ಹೋಟೆಲ್‌ಗೆ ರಜೆ ಮಾಡಿ ಡಾ.ರಾಜ್‌ ಜನ್ಮದಿನ ಆಚರಿಸುತ್ತಿದ್ದೇವೆ, ಇದರ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.ಮುಖಂಡರಾದ ದಯಾನಂದ್, ಧನುಷ್, ಎನ್.ಮಂಜುನಾಥ್, ರಾಜಣ್ಣ, ಲಕ್ಷ್ಮೀನಾರಾಯಣ, ಪ್ರತಾಪ್, ರವಿ ಮಲ್ಲಣ್ಣ, ಡಿ.ರಾಜ್‌ಕುಮಾರ್, ಆಟೋಯಡಿಯೂರಪ್ಪ, ಸಾಗರ್ ಮೊದಲಾದವರು ಭಾಗವಹಿಸಿದ್ದರು.

Share this article