ಕನ್ನಡಪ್ರಭ ವಾರ್ತೆ ವಿಜಯಪುರ
ನಾಡಿನ ಸಂಸ್ಕೃತಿ, ಭವ್ಯ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಸಾಮಾಜಿಕ ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ನಾಡಿನ ಜನರ ಮನಗಳಲ್ಲಿ ಮನೆ ಮಾಡಿದ ಡಾ.ರಾಜ್‌ಕುಮಾರ್ ಅವರು ಕರ್ನಾಟಕ ಕಂಡ ಮೇರು ವ್ಯಕ್ತಿತ್ವದ ವರನಟ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಬಣ್ಣಿಸಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಡಾ.ರಾಜ್ ಕುಮಾರ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ರಾಜ್‌ಕುಮಾರ ಅವರು ಓರ್ವ ಗಾಯಕರಾಗಿ, ನಟರಾಗಿ ಕನ್ನಡ ನಾಡು-ನುಡಿ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ಕನ್ನಡಕ್ಕಾಗಿ ಕೊಡುಗೆ ನೀಡಿದ್ದಾರೆ. ಅವರ ಸರಳತೆ ಅಭಿನಯದ ಮೂಲಕ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದರು.ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡಕ್ಕಾಗಿ ಶ್ರಮಿಸಿದ ಡಾ.ರಾಜ್ ಇಂದಿಗೂ ಕನ್ನಡನಾಡಿನ ಪ್ರತಿಯೊಬ್ಬರ ಮನೆ-ಮನಗಳಲ್ಲಿ ಅಜರಾಮರ. ಜನಸಾಮಾನ್ಯರ ಬದುಕು ಬವಣೆಗಳು ಅವರ ಚಲನಚಿತ್ರಗಳಲ್ಲಿ ಹಾಸು ಹೊಕ್ಕಾಗಿವೆ. ರಂಗಭೂಮಿ, ಚಲನಚಿತ್ರ ಗಾಯನದಲ್ಲಿ ಅತ್ಯುತ್ತಮವಾದ ಸಾಧನೆಯ ಮೂಲಕ ಈ ನಾಡಿನ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತಿದ್ದಾರೆ. ಅವರು ಗಾಯಕರಾಗಿ ಹಾಡಿದ ಹಾಡುಗಳು ಕನ್ನಡಿಗರ ಮನದಲ್ಲಿ ಇಂದಿಗೂ ರಾರಾಜಿಸುವುದನ್ನು ನಾವು ಕಾಣಬಹುದಾಗಿದೆ. ಅವರ ನಟಿಸಿದ ಚಲನಚಿತ್ರಗಳು ಸಮಾಜದ ಪ್ರತಿಯೊರ್ವರಿಗೂ ಒಂದಿಲ್ಲೊಂದು ವಿಶಿಷ್ಟವಾಗಿ ಪ್ರೇರಣೆಯಾಗಿವೆ. ಅವರ ಸಾಮಾಜಿಕ ಸಂದೇಶವುಳ್ಳ ಚಲನಚಿತ್ರಗಳು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿವೆ ಎಂದು ಸ್ಮರಿಸಿದರು.
ವಿಶೇಷ ಉಪನ್ಯಾಸ ನೀಡಿದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಮಾತನಾಡಿ, ಅಭಿನಯ ಕಲಾಶ್ರೀ, ಅಭಿನಯ ಸವ್ಯಸಾಚಿ, ಕನ್ನಡದ ಕಂದ, ಕನ್ನಡದ ಚೇತನ, ಕನ್ನಡದ ಧ್ರುವತಾರೆ, ಕರುನಾಡ ಕಲಾನಿಧಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಮೇರು ನಟ ಡಾ.ರಾಜ್‌ಕುಮಾರ ಅವರು ದಾದಾಸಾಹೇಬ ಫಾಲ್ಕೆ, ಪದ್ಮಭೂಷಣ ಅನೇಕ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ವ್ಯಕ್ತಿತ್ವ ಹಾಗೂ ಅಸಾಮಾನ್ಯ ನಟನೆಯ ಮೂಲಕ ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ನಾಡಿಗೆ ಮಾದರಿಯಾದ ಡಾ.ರಾಜ್‌ಕುಮಾರ್ ಅವರ ಬದುಕು ನಮಗೆ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸಹ ಕಾರ್ಯದರ್ಶಿ ಅನುಸೂಯಾ ಚಲವಾದಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕೆಎಂಎಫ್‌ನ ಅರವಿಂದ ಕನ್ನೂರ, ತೋಟಗಾರಿಕೆ ಇಲಾಖೆ ಅಧಿಕಾರಿ ಭಗವಂತ ಜಿಗಜಿಣಗಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಶರಣು ಸಬರದ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಸೋಮನಗೌಡ ಕಲ್ಲೂರ ಉಪಸ್ಥಿರಿದ್ದರು.
ಈ ಕಾರ್ಯಕ್ರಮದಲ್ಲಿ ಗಾಯಕರಾದ ವಿರೇಶ ವಾಲಿ, ಈಶ್ವರ ಉಮರಾಣಿ, ಸಾಗರ ಬಾಗಲಕೋಟೆ, ಕಿರಣ ಪೂಜಾರಿ ಡಾ.ರಾಜ್‌ಕುಮಾರ ಅವರ ಅನೇಕ ಗೀತೆಗಳನ್ನು ಹಾಡಿದರು. ಇದಕ್ಕೆ ಕಳೆ ಕಟ್ಟುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅವರು ಹಾಡಿನ ಮೂಲಕ ವಿಶೇಷ ಗಮನ ಸೆಳೆದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ತಮ್ಮ ಅದ್ಭುತ ಪದ ಜೋಡಣೆಯ ಸಾಲುಗಳೊಂದಿಗೆ ಡಾ.ರಾಜ್‌ಕುಮಾರ ಅವರ ಕಲಾ ಸೇವೆ, ನಾಡು-ನುಡಿಯ ಸೇವೆಯ ಬಗ್ಗೆ ಸುದೀರ್ಘ ಉಪನ್ಯಾಸ ರೂಪದಲ್ಲಿ ಬೆಳಕು ಚೆಲ್ಲಿದರು.