ಕಡೆಂಗೋಡ್ಲು ಪ್ರಶಸ್ತಿಗೆ ಡಾ.ಶೈಲೇಶ್‌ ಕುಮಾರ್‌ ಕವನ ಸಂಕಲನ ಆಯ್ಕೆ

KannadaprabhaNewsNetwork | Published : May 25, 2024 12:55 AM

ಸಾರಾಂಶ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ನೀಡುವ 2024ರ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರ ‘ಅನುವಾದವೆಂಬೋ ಸಂಬಂಧ’ ಕವನ ಸಂಕಲನ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ೧೦ ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ನೀಡುವ 2024ರ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರ ‘ಅನುವಾದವೆಂಬೋ ಸಂಬಂಧ’ ಕವನ ಸಂಕಲನ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ೧೦ ಸಾವಿರ ರು. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರುವಾಸಿಯಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ

ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರು ಬೆಂಗಳೂರು ವಿ.ವಿ.ಯಿಂದ ಕಂಪ್ಯೂಟರ್‌ ಸೈನ್ಸ್ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್.ಡಿ ಹಾಗೂ ಇನ್‌ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಕನ್ನಡ ಎಂ.ಎ. ಪದವಿ ಪಡೆದು ಪಿಎಚ್.ಡಿ.ಗಾಗಿ ಜೈನ್‌ ವಿಶ್ವವಿದ್ಯಾಲಯದಲ್ಲಿ ನವ್ಯಕಾವ್ಯದ ಕುರಿತಾದ ಸಂಶೋಧನೆಯ ಅಂತಿಮ ಹಂತದಲ್ಲಿದ್ದಾರೆ. ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಇವರು ಪ್ರಸ್ತುತ ಅಮೆಜಾನ್ ಕಂಪನಿಯಲ್ಲಿ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಹಿತ್ಯ, ಸಂಶೋಧನೆ, ಪುಸ್ತಕ ಬರವಣಿಗೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಸೃಜನಶೀಲ ಬಹುಮುಖ ಪ್ರತಿಭೆ ಹೊಂದಿರುವ ಶೈಲೇಶ್ ಕುಮಾರ್ ಅವರು ೯ ತಾಂತ್ರಿಕ ಪುಸ್ತಕಗಳನ್ನು ಬರೆದಿದ್ದಾರೆ. 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಅವರು ಬರೆದಿರುವ ೩೯ ಪಠ್ಯಪುಸ್ತಕ ಅಧ್ಯಾಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪಠ್ಯವಾಗಿವೆ. ಅವರು ತಮ್ಮ ಸಂಶೋಧನೆಗಾಗಿ ಎರಡು ಅಮೆರಿಕೆಯ ಪೇಟೆಂಟ್‌ಗಳನ್ನು ಹೊಂದಿದ್ದಾರೆ.

ಅವರ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು ಪ್ರತಿಷ್ಠಿತ ವಿಂಗ್ವರ್ಡ್ ರಾಷ್ಟ್ರೀಯ ಕವನ ಸ್ಪರ್ಧೆ ಹಾಗೂ ಇತರ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ ಎಂದು ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article