ಕನ್ನಡಪ್ರಭ ವಾರ್ತೆ ಮೈಸೂರುಆಟೋಮೋಟಿವ್ ಆಕ್ಸೆಲ್ಸ್ ತನ್ನ ಸಿಎಸ್‌ಆರ್ ಯೋಜನೆಯ ಭಾಗವಾಗಿ ಅಪೋಲೋ ಬಿ.ಜಿ.ಎಸ್ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕ್ಲಬ್‌ಫೂಟ್ ಮತ್ತು ಸೆರೆಬ್ರಲ್ ಪಾಲ್ಸಿ ಪೀಡಿತ ಮಕ್ಕಳಿಗೆ ವಿಶೇಷ ಚಿಕಿತ್ಸೆ ಒದಗಿಸಲು ಮುಂದಾಗಿದೆ.ಇದು ರೋಗ ಪೀಡಿತ ಮಕ್ಕಳು ಮತ್ತು ಅವರ ಕುಟುಂಬವು ಗುಣಮಟ್ಟದ ಉತ್ತಮ ಜೀವನ ನಡೆಸಲಿ ಎಂಬ ಸದಾಶಯವನ್ನು ಹೊಂದಿದೆ. ಅಲ್ಲದೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೊಸ ಭರವಸೆ ಮತ್ತು ಅವಕಾಶ ನೀಡಿದಂತಾಗಿದೆ.ಆಸ್ಪತ್ರೆಯ ಮಕ್ಕಳ ಮೂಳೆ ಶಸ್ತ್ರಚಿಕಿತ್ಸಕ ಸಲಹೆಗಾರ ಡಾ. ಶ್ರೇಯಸ್ ಆಳ್ವ ಮಾತನಾಡಿ, ಸಮಾಜಕ್ಕೆ ಇದೊಂದು ಉದಾತ್ತ ಚಿಂತನೆಯನ್ನು ಒಳಗೊಂಡ ಮಾದರಿಯ ನಡೆ. ಹೆಚ್ಚೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದು ಇಂತಹ ಸಾಮಾಜಿಕ ಜವಾಬ್ದಾರಿ ಸ್ವೀಕರಿಸಬೇಕು. ಚಿಕಿತ್ಸೆಗಳು ಮಕ್ಕಳ ಜೀವನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಚಿಕಿತ್ಸೆ ಸಿಗದೆ ಅನೇಕ ಮಕ್ಕಳು ಇಂತಹ ಅಂಗವೈಕಲ್ಯಗಳಿಂದ ಬಳಲುತ್ತಿದ್ದಾರೆ. ಆದರೆ ಸರಿಯಾದ ಆರೈಕೆ ಮತ್ತು ಸಮಯೋಚಿತ ಕಾಳಜಿಯಿಂದ ಅವರ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎಂದು ಅವರು ಹೇಳಿದರು.ಆಟೋಮೊಟಿವ್ ಅಕ್ಸೆಲ್ಸ್ ನ ಹಿರಿಯ ಪ್ರಧಾನ ವ್ಯವಸ್ಥಾಪಕ ವಿನಾಯಕ ವಿ. ಭಟ್ ಮಾತನಾಡಿ, ಆಟೋಮೋಟಿವ್ ಆಕ್ಸೆಲ್ಸ್ ಇಡೀ ತಂಡವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಸಹಕಾರ ನೀಡುತ್ತಿರುವುದು ಹೆಚ್ಚು ಸಂತೋಷ ಮತ್ತು ಹೆಮ್ಮೆಯನ್ನುಂಟು ಮಾಡಿದೆ. ನಮ್ಮ ಪ್ರಯತ್ನದಿಂದ ರೋಗ ಪೀಡಿತ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆತ್ಮವಿಶ್ವಾಸದಿಂದ ಹೆಜ್ಜೆ ಇಡಲು ಇದು ಸಹಾಯ ಮಾಡುತ್ತಿದೆ ಎಂದರು.ಅಪೋಲೋ ಆಸ್ಪತ್ರೆ ಉಪಾಧ್ಯಕ್ಷ ಎನ್.ಜಿ. ಭರತೀಶ್‌ರೆಡ್ಡಿ ಮಾತನಾಡಿ, ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್ ಸ್ವೀಕರಿಸಿರುವ ಈ ಕ್ರಮ ಅತ್ಯಂತ ಶ್ಲಾಘನೀಯ. ಇಂತಹ ಉದಾತ್ತ ಉದ್ದೇಶಕ್ಕೆ ತೆಗೆದುಕೊಂಡಿರುವ ಈ ನಿರ್ಣಯ ಮುಂದೆ ಬರುವ ಕಾರ್ಪೊರೇಟ್ ಗಳಿಗೆ ಸ್ಫೂರ್ತಿ ದೊರತಂತೆ ಆಗುತ್ತದೆ ಎಂದು ಹೇಳಿದರು.