ಕುಮಟಾ: ಅಪ್ಪಟ ದೇಶಭಕ್ತ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ದೇಶಕ್ಕಾಗಿ ಬಲಿದಾನವಾಗಿದ್ದರೂ ಅಖಂಡ ರಾಷ್ಟ್ರೀಯತೆಯ ಚಿಂತನೆಗಳ ರೂಪದಲ್ಲಿ ಸದಾ ನಮ್ಮ ನಡುವೆ ಇರುತ್ತಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಬಿಜೆಪಿ ಹೆಗಡೆ ಮಹಾಶಕ್ತಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಪುಣ್ಯತಿಥಿಯಾದ ಜೂ. ೨೩ನ್ನು ಬಲಿದಾನ ದಿನ ಎಂದು ಭಾರತದಾದ್ಯಂತ ಸ್ಮರಿಸಲಾಗುತ್ತದೆ. ರಾಷ್ಟ್ರೀಯ ಏಕತೆ, ರಾಜಕೀಯ ಧರ್ಮನಿಷ್ಠೆ, ದುರ್ಬಲರ ಮೇಲಿನ ಕಾಳಜಿಯಿಂದ ಡಾ. ಶ್ಯಾಮಪ್ರಸಾದ ವ್ಯಕ್ತಿತ್ವ ನಮಗೆಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದರು.ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಪ್ರಮುಖ ಭಾರತೀಯ ನ್ಯಾಯವಾದಿಯಾಗಿ, ಶಿಕ್ಷಣ ತಜ್ಞರಾಗಿ ಮತ್ತು ರಾಜಕಾರಣಿಯಾಗಿದ್ದ ಡಾ. ಶ್ಯಾಮಪ್ರಸಾದ ಅವರು ಭಾರತದ ಮೊದಲ ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ, ಲಿಯಾಖತ್ ಚಳವಳಿಯಲ್ಲಿ ಅವರ ಮುಂಚೂಣಿ ನಾಯಕತ್ವ ಸ್ಮರಣೀಯವಾಗಿದೆ. ಡಾ. ಶ್ಯಾಮಪ್ರಸಾದ ಅವರ ವ್ಯಕ್ತಿತ್ವ ಹಾಗೂ ದೇಶನಿಷ್ಠೆ ಭಾರತವಾಸಿಗಳಿಗೆ ಅನುಕರಣೀಯ ಎಂದರು.
ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ರಾಜ್ಯ ಶಿಕ್ಷಣ ಪ್ರಕೋಷ್ಠ ಸಂಚಾಲಕ ಎಂ.ಜಿ. ಭಟ್, ನಿಕಟಪೂರ್ವ ಮಂಡಲಾಧ್ಯಕ್ಷ ಹೇಮಂತ ಕುಮಾರ ಗಾಂವಕರ, ಡಾ. ಜಿ.ಜಿ. ಹೆಗಡೆ, ಗಣೇಶ ಪಂಡಿತ, ಹೆಗಡೆ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ, ಪದಾಧಿಕಾರಿಗಳಾದ ಯೋಗೇಶ ಪಟಗಾರ, ದೀಪಾ ಹಿಣಿ, ರಾಮಾ ಮಡಿವಾಳ, ಪಿ.ಟಿ. ಪಟಗಾರ, ಪುರಸಭೆ ಸದಸ್ಯರಾದ ತುಳಸು ಗೌಡ, ಮೋಹಿನಿ ಗೌಡ, ಸೂರ್ಯಕಾಂತ ಗೌಡ ಇನ್ನಿತರರು ಇದ್ದರು.