ಕೊಪ್ಪಳ:
ಡಾ. ಸಿದ್ದಯ್ಯ ಪುರಾಣಿಕ ಟ್ರಸ್ಟ್‌ನ ಕಾರ್ಯ ಚಟುವಟಿಕೆಗಳನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಟ್ರಸ್ಟ್‌ನ ನೂತನ ಅಧ್ಯಕ್ಷ ಅಜ್ಮೀರ ನಂದಾಪುರ ಹೇಳಿದರು.ಜಿಲ್ಲಾಡಳಿತ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಏನಾದರೂ ಆಗು ಮೊದಲು ಮಾನವನಾಗು ಎಂಬ ಸಂದೇಶ ಕೊಟ್ಟ ಡಾ. ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ಟ್ರಸ್ಟ್ ಜಿಲ್ಲೆಯಲ್ಲಿ ರಚನೆಯಾಗಿರುವುದು ಹೆಮ್ಮೆಯ ವಿಷಯ. ಕುವೆಂಪು ಅವರ ಮನುಜಮತ, ಸಮ ಸಿದ್ಧಾಂತವನ್ನು ಜಗತ್ತಿಗೆ ಹೇಳಿಕೊಟ್ಟ ವ್ಯಕ್ತಿ ಡಾ. ಸಿದ್ದಯ್ಯ ಪುರಾಣಿಕ್ ಅವರಾಗಿದ್ದಾರೆ. ಉರ್ದು ಪ್ರಭಾವವಿರುವ ಕಾಲದಲ್ಲಿ ಉರ್ದು, ಸಂಸ್ಕೃತ, ಇಂಗ್ಲಿಷ್, ಕನ್ನಡ ಹಾಗೂ ತೆಲಗು ಭಾಷೆಗಳಲ್ಲಿ ಪಾರಂಗತವಾಗಿರುವ ವ್ಯಕ್ತಿಯಾಗಿದ್ದರು ಎಂದರು.ಕಲ್ಯಾಣ ಕರ್ನಾಟಕ ಭಾಗದ ಇವರು ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕಾವ್ಯಾನಂದ ಕಾವ್ಯನಾಮದೊಂದಿಗೆ ಕೃತಿ, ಕವನ ಸಂಕಲ ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪುರಾಣಿಕ್ ಅವರ ಸಿದ್ಧಾಂತವನ್ನು ದೇಶಾದ್ಯಂತ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡಲಿದೆ ಎಂದರು.
ಕುಕನೂರು ತಾಲೂಕಿನ ದ್ಯಾಂಪುರದಲ್ಲಿ ಜನಿಸಿದ ಡಾ. ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಬೇಕೆಂದು ಬಹುದಿನದ ಬೇಡಿಕೆಯಾಗಿತ್ತು. ಈ ಕುರಿತು ಹಲವು ಪ್ರಯತ್ನಗಳು ಸಹ ನಡೆದಿದ್ದವು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಶಿವರಾಜ ತಂಗಡಗಿ ಅವರೇ ಇರುವುದರಿಂದ ಟ್ರಸ್ಟ್ ರಚನೆ ಸಾಧ್ಯವಾಯಿತು. ಈ ಟ್ರಸ್ಟ್ ಸ್ಥಾಪನೆಯಿಂದ ಈ ಭಾಗದ ಅನೇಕ ಪ್ರತಿಭಾವಂತ ಬರಹಗಾರರು, ಲೇಖಕರು, ಕವಿ, ಸಾಹಿತಿಗಳಿಗೆ ಅವಕಾಶಗಳು ಸಿಗಲಿದೆ ಎಂದು ಹೇಳಿದರು.ರಾಜ್ಯ ಮತ್ತು ವಿಭಾಗಮಟ್ಟದಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಹೆಸರಿನಲ್ಲಿ ಪ್ರಶಸ್ತಿ ನೀಡಲು ಯೋಜನೆ ಹಾಗೂ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಡಾ. ಸಿದ್ದಯ್ಯ ಪುರಾಣಿಕ್ ಸಾಹಿತ್ಯದ ಕುರಿತು ಅಧ್ಯಯನ ನಡೆಯಬೇಕು ಎಂದರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ., ಟ್ರಸ್ಟ್ ಸದಸ್ಯ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಶಿ.ಕಾ. ಬಡಿಗೇರ, ಡಾ. ಗೀತಾ ಚಿ. ಪಾಟೀಲ್, ಡಾ. ಹನುಮಂತಪ್ಪ ಚಂದಲಾಪೂರ, ಹನುಮಂತಪ್ಪ ವಡ್ಡರ, ರಮೇಶ ಬನ್ನಿಕೊಪ್ಪ, ರತ್ನಮ್ಮ ರತ್ನಾಕರ, ಪ್ರೇಮಾ ಎಸ್. ಮುದಗಲ್ ಉಪಸ್ಥಿತರಿದ್ದರು.