-ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಹಾಪುರ
ಕ್ಷಯರೋಗದ ಲಕ್ಷ್ಮಣಗಳು ಕಂಡು ಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಸಂಜೀವ ಕುಮಾರ್ ರಾಯಚೂರುಕರ್ ತಿಳಿಸಿದರು.ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ, ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು. ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು ಎಂದರು.
ಡಾ. ಯಲ್ಲಪ್ಪ ಪಾಟೀಲ್ ಮಾತನಾಡಿ, ಕ್ಷಯ ರೋಗ ವಂಶಪಾರಂಪರವಾಗಿ ಬರುವುದಿಲ್ಲ. ಕ್ಷಯ ರೋಗದ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ರೋಗ ನಿವಾರಣೆಗೆ ಪರಿಶುದ್ಧ ವಾತಾವರಣದ ಜತೆಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಅಗತ್ಯ ಎಂದರು.
ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ. ಗಂಗಾಧರ್ ಚಟ್ರಿಕಿ, ಮಂಜುನಾಥ್ ಎಡಿಸಿ ಯಾದಗಿರಿ, ಅಶೋಕ್ ಕುಮಾರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಪ್ಪ ಕಾಂಬಳೆ, ಸಂಗಣ್ಣ ನುಚ್ಚಿನ್, ಖಾಸಗಿ ಔಷಧಿ ವಿತರಕರ ಸಂಘದ ಅಧ್ಯಕ್ಷ ಅಯ್ಯನಗೌಡ ಇದ್ದರು.
ಫೋಟೊ: 6ವೈಡಿಆರ್7: ಶಹಾಪುರ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.