ಕಾರವಾರ: ವಚನ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದು, ವಚನ ಸಾಹಿತ್ಯದ ಸಂರಕ್ಷಣೆಗೆ ಪಣ ತೊಟ್ಟಿದ್ದ ಡಾ. ಫ.ಗು. ಹಳಕಟ್ಟಿ ಅವರು ನಾಡಿನಾದ್ಯಂತ ಮನೆ ಮನೆಗಳಗೆ ತೆರಳಿ, ವಚನ ಸಾಹಿತ್ಯದ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಮುದ್ರಿಸುವ ಮೂಲಕ ನಾಡಿನ ಜನತೆಗೆ ಅವುಗಳನ್ನು ತಲುಪಿಸುವಂತಹ ಮಹಾನ್ ಕಾರ್ಯ ಮಾಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ತಿಳಿಸಿದರು.
ಶಿಕ್ಷಕ ಗಣೇಶ ಬಿಷ್ಠಣ್ಣನವರ ಮಾತನಾಡಿ, ಡಾ. ಫ.ಗು. ಹಳಕಟ್ಟಿ ಅವರು ವೃತ್ತಿಯಲ್ಲಿ ಶಿಕ್ಷಕ, ಸಾಹಿತಿ, ಪತ್ರಕರ್ತರಾಗಿದ್ದರು. ಅವರು 252 ವಚನಗಾರರ ವಚನಗಳನ್ನು ಸಂಗ್ರಹ ಮಾಡಿದ್ದಾರೆ. ಅವರು ಕೊಡುಗೆಯಿಲ್ಲದೇ ಇದ್ದಲ್ಲಿ ವಚನ ಸಾಹಿತ್ಯವನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಪತ್ರಿಕಾ ಮಾಧ್ಯಮದಿಂದ ಏಕಕಾಲಕ್ಕೆ 2 ಪತ್ರಿಕೆ ಸಂಪಾದಿಸಿ, ಪ್ರಕಟಿಸಿ ಜನಸಮೂಹದ ಜವಾಬ್ಧಾರಿ ತಿಳಿಸುವ ಕಾರ್ಯಕ್ಕೆ ಕೈ ಹಾಕಿದರು. 1926ರಲ್ಲಿ ಶಿವಾನುಭವ ಮಾಸಿಕ ಪತ್ರಿಕೆ, 1927ರಲ್ಲಿ ನವಕರ್ನಾಟಕ ಎಂಬ ವಾರ ಪತ್ರಿಕೆ ಆರಂಭಿಸಿದರು. ಇವರ ಸಾಹಿತ್ಯ ಸೇವೆ ಮೆಚ್ಚಿ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ಸನ್ಮಾನಿಸಲಾಯಿತು ಎಂದರು.
ಜಿಪಂ ಉಪಕಾರ್ಯದರ್ಶಿ ನಾಗೇಶ ರಾಯ್ಕರ, ಶಿಕ್ಷಣ ಇಲಾಖೆಯ ಅಧಿಕಾರಿ ಶಿವಾನಂದ ಕೋಟಿ, ಪಾಶುಪಾಲನೆ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ ಮೊದಲಾದವರು ಇದ್ದರು.