ಹಾನಗಲ್ಲ: ಮಹಿಳಾ ಸ್ವಾವಲಂಬನೆ ಆರ್ಥಿಕ ಸಬಲತೆಯ ಜತೆಗೆ ವ್ಯಸನಮುಕ್ತ ಸಮಾಜದ ಕನಸು ನನಸಾಗಿಸುವ ದಿಟ್ಟ ಹೆಜ್ಜೆ ಹಾಕಿರುವ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಚಿಂತನೆ ದೇಶಕ್ಕೆ ಮಾದರಿಯಾದುದು ಎಂದು ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಹೇಳಿದರು.
ಗುರುವಾರ ತಾಲೂಕಿನ ತಿಳವಳ್ಳಿಯ ಹೆಗಡೆಕಟ್ಟೆ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಆಯೋಜಿಸಿದ ೧೮೯೧ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಷ್ಟದ ಪ್ರತಿಫಲ ಸುಖವೇ ಆಗಿದೆ. ಕೌಟುಂಬಿಕ ಸೌಖ್ಯಕ್ಕಾಗಿ ಸಮಯ ಮೀಸಲಿಡಿ. ದುರ್ವ್ಯಸನಗಳಿಗೆ ಬಲಿಯಾಗಿ ನಮ್ಮನ್ನು ನಾವೇ ಹಾಳು ಮಾಡಿಕೊಳ್ಳದೆ, ನಮ್ಮ ಕುಟುಂಬದ ಹಿತ ಕಾಯ್ದುಕೊಳ್ಳುವ ಜತೆಗೆ ಸಮಾಜದ ಆಸ್ತಿಯಾಗೋಣ. ಇಂದು ಧರ್ಮಸ್ಥಳ ಸಂಸ್ಥೆ ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದು ಗಮನಾರ್ಹ ಸಂಗತಿ. ಇಂತಹ ಸಂಸ್ಥೆಗೆ ನೈತಿಕ ಬೆಂಬಲ ನೀಡೋಣ. ಅಪಪ್ರಚಾರಕ್ಕೆ ಕಿಡಿಗೊಡದೇ ಸೇವೆಯ ಫಲ ಪಡೆಯಲು ಮುಂದಾಗೋಣ. ನಾಳೆಗೆ ನಮ್ಮ ಸಮಾಜ ಗಟ್ಟಿಗೊಳ್ಳಲಿ. ಅದಕ್ಕಾಗಿ ಈಗಲೇ ಗಟ್ಟಿಯಾಗೋಣ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಕತ್ತಲ ಮಾತನಾಡಿ, ತುಂಬಿದ ಬಾಳಿಗೆ ಬೆಳಕು ನೀಡುವುದೇ ನಮ್ಮ ಸಂಸ್ಥೆಯ ಮೂಲೋದ್ದೇಶ. ನಾವು ಕಷ್ಟಕ್ಕೀಡಾಗುವುದು ಬೇಡ. ಕಷ್ಟ ಬಂದರೆ ಪರಿಹರಿಸಿಕೊಂಡು ಮುನ್ನಡೆಯೋಣ. ಮನಸ್ಸುಗಳನ್ನು ಕಲಕುವುದು ಬೇಡ. ಪರಿವರ್ತನೆ ಜಗದ ನಿಯಮ. ವ್ಯಸನಕ್ಕೆ ಬಲಿಯಾದಾಗ ಹಿರಿಯರ ಮಾರ್ಗದರ್ಶನದಲ್ಲಿ ಒಳಿತಿನ ಕಡೆಗೆ ನಡೆಯೋಣ. ಒಳ್ಳೆಯ ಕನಸುಗಳನ್ನು ಕಟ್ಟಿಕೊಳ್ಳೋಣ. ಸೇವೆಯ ಸೇತುವೆ ಆಗೋಣ. ನಮ್ಮ ಸಂಸ್ಥೆ ಈಗ ಸ್ವಸಹಾಯ ಸಂಘಗಳಿಗೆ ಹಾವೇರಿ ಜಿಲ್ಲೆಯಲ್ಲಿ ₹೧೮ ಕೋಟಿ ಲಾಭಾಂಶ ನೀಡುತ್ತಿದೆ. ರಾಜ್ಯದಲ್ಲಿ ₹೬೦೦ ಕೋಟಿ ಲಾಭಾಂಶ ನೀಡುತ್ತಿದೆ. ರಾಜ್ಯದಲ್ಲಿ ೫೪ ಲಕ್ಷ ಸ್ವಸಹಾಯ ಸಂಘಗಳಿವೆ. ಸಮಜಕ್ಕೆ ಒಳಿತು ಬಯಸುವುದೇ ನಮ್ಮ ಧ್ಯೇಯ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಮಾಲತೇಶ ಹೆಗಡಿಕಟ್ಟಿ, ನರಳುವ ಜೀವನ ಬೇಡ. ನಲಿವ ಜೀವನ ಪಡೆಯೋಣ. ಸಮಾಜದ ಒಳಿತಿಗೆ ಕೈಲಾದ ಸಹಾಯ ಮಾಡೋಣ. ನಮ್ಮ ಹೃದಯ ಮನಸ್ಸುಗಳು ಒಂದಾಗಿ ಸೇವೆ ಸಲ್ಲಿಸಿದಾಗ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ. ಕೌಟುಂಬಿಕ ಸೌಖ್ಯವೇ ನಿಜವಾದ ಸ್ವರ್ಗ ಎಂದರು.ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು, ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ನಿರ್ದೇಶಕರಾದ ನಾರಾಯಣ ಚಿಕ್ಕೊರ್ಡೆ, ವಾಸುದೇವಮೂರ್ತಿ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಡಾ. ಸುನೀಲ ಹಿರೇಮಠ, ತಿಳವಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಸದಸ್ಯರಾದ ಅಪ್ರೋಜಾ ಕನವಳ್ಳಿ, ಶಶಿಕಲಾ ಕೊಂಡೇರ, ಲಕ್ಷ್ಮೀಬಾಯಿ ಪಾಟೀಲ, ನಾಗರತ್ನಾ ಚನ್ನಾಪುರ ಅತಿಥಿಗಳಾಗಿದ್ದರು.
೮೪ ಜನ ಶಿಬಿರದಲ್ಲಿ ವ್ಯಸನಮುಕ್ತರಾದರು. ಸಮಾರೋಪದಂದು ವ್ಯಸನಮುಕ್ತರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಸ ಜೀವನಕ್ಕೆ ಕಾಲಿಟ್ಟರು.