ಕರಡು ಮತದಾರರ ಪಟ್ಟಿ ಪ್ರಕಟ: ಮುಖಂಡರೊಂದಿಗೆ ಡಿಸಿ ಸಭೆ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶುಕ್ರವಾರ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ ಕರಡು ಮತದಾರರ ಪಟ್ಟಿ ಪ್ರಕಟ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶುಕ್ರವಾರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ನೀಡಿದರು. ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ಮಾಹಿತಿ ನೀಡಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಸ್ಥಳಾಂತರ ಮತ್ತಿತರ ಸಂಬಂಧಿಸಿದಂತೆ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಮತದಾರರ ಸಹಾಯವಾಣಿ (ವೋಟರ್ ಹೆಲ್ಪ್‌ಲೈನ್‌)ನಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ. ಇಲ್ಲದಿದ್ದಲ್ಲಿ ತಹಸೀಲ್ದಾರರ ಕಚೇರಿಯ ಚುನಾವಣಾ ಶಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೋಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ (VOTER HELPLINE APP) ಹಾಗೂ https://voters.eci.gov.in/ / VOTERS’ SERVICE PORTAL ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಆಧಾರ್ ಲಿಂಕ್ ಮಾಡಲಾಗಿದ್ದು, ಯಾವುದಾದರೂ ಒಂದು ಮತಗಟ್ಟೆಯಲ್ಲಿ ಮಾತ್ರ ಹೆಸರು ಇರಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಬರಲಿದ್ದು, ಅರ್ಹರೆಲ್ಲರೂ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅಗತ್ಯ ಸಹಕಾರ ನೀಡುವಂತೆ ರಾಜಕೀಯ ಪಕ್ಷಗಳ ಪ್ರಮುಖರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನಿರಾ ಮೈನಾ ಮಾತನಾಡಿ, ಕೊಡಗು ಜಿಲ್ಲೆಯ ಹಾಡಿಯ ಜನರು ಇನ್ನೂ ಆಧಾರ್ ಕಾರ್ಡ್ ಪಡೆದುಕೊಂಡಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಕೊಡಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಆಧಾರ್ ಪಡೆಯದಿರುವ ಆದಿವಾಸಿ ಕುಟುಂಬಗಳಿಗೆ ‘ಆಧಾರ್ ನೋಂದಣಿ ವಿಶೇಷ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕರಡು ಮತದಾರರ ಪಟ್ಟಿ ಸಂಬಂಧಿಸಿದಂತೆ ತಿದ್ದುಪಡಿ ಮತ್ತಿತರ ಸಂಬಂಧ ಈಗಲೇ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾರರ ಸಹಾಯವಾಣಿ ಸಂಪರ್ಕಿಸುವಂತೆ ತಿಳಿಸಿದರು. ಬಿಜೆಪಿ ಮುಖಂಡ ಅಪ್ಪಣ್ಣ ಅವರು ಕರಡು ಮತದಾರರ ಪಟ್ಟಿ ಹಾಗೂ ಶಿಕ್ಷಕರ ಮತ್ತು ಪದವೀಧರರ ಚುನಾವಣೆ ಸಂಬಂಧ ಅಗತ್ಯ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಇದ್ದರು.

Share this article