ಒಳಚರಂಡಿ ಕಾಮಗಾರಿ ಕಳಪೆ: ಭಟ್ಕಳ ಪುರಸಭೆ ಸದಸ್ಯರ ಆಕ್ರೋಶ

KannadaprabhaNewsNetwork | Published : Aug 10, 2024 1:44 AM

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಮಾಡಿರುವ ಒಳಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಮ್ಯಾನ್ ಹೋಲ್ ಕಳಪೆಯಾಗಿದೆ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ, ಉತ್ತಮ ದರ್ಜೆಯ ಪೈಪ್ ಬಳಸಿಲ್ಲ. ಮಳೆಗಾಲದಲ್ಲಿ ಮ್ಯಾನ್ ಹೋಲ್‌ನಿಂದ ಮಳೆನೀರು ಹರಿಯುತ್ತಿದೆ.

ಭಟ್ಕಳ: ಇಲ್ಲಿನ ಪುರಸಭೆಯಲ್ಲಿ ಆಡಳಿತಾಧಿಕಾರಿ ಮತ್ತು ಸಹಾಯಕ ಆಯುಕ್ತೆ ಡಾ. ನಯನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಒಳಚರಂಡಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರು ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಕೈಸರ್, ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಮಜಿ, ಸದಸ್ಯರಾದ ಅಲ್ತಾಪ್ ಖರೂರಿ, ಇಮ್ಶಾದ್, ಅಬ್ದುಲ್ ರವೂಪ್ ಮುಂತಾದವರು ಪುರಸಭೆ ವ್ಯಾಪ್ತಿಯಲ್ಲಿ ಮಾಡಿರುವ ಒಳಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಮ್ಯಾನ್ ಹೋಲ್ ಕಳಪೆಯಾಗಿದೆ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ, ಉತ್ತಮ ದರ್ಜೆಯ ಪೈಪ್ ಬಳಸಿಲ್ಲ. ಮಳೆಗಾಲದಲ್ಲಿ ಮ್ಯಾನ್ ಹೋಲ್‌ನಿಂದ ಮಳೆನೀರು ಹರಿಯುತ್ತಿದೆ.

ಕಾಮಗಾರಿಯನ್ನು ಎಂಜಿನಿಯರ್‌ ಸರಿಯಾಗಿ ಪರಿಶೀಲಿಸಿಲ್ಲ. ಒಳಚರಂಡಿ ಕಾಮಗಾರಿ ಸಮರ್ಪಕ ಆಗದೇ ಇರುವುದನ್ನು ಸಾರ್ವಜನಿಕರು ನಮ್ಮ ಬಳಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಮ್ಮಿಂದ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಮಾಡಲಾದ ಒಳಚರಂಡಿ ಕಾಮಗಾರಿಯ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಹೀಗಾಗಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ಆಗ್ರಹಿಸಿದರು.

ಸದಸ್ಯರಿಂದ ಒಳಚರಂಡಿ ಕಾಮಗಾರಿ ಬಗ್ಗೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ ಒಳಚಂಡಿ ಅಭಿಯಂತರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಡಳಿತಾಧಿಕಾರಿ ಡಾ. ನಯನಾ ಅವರು, ಪುರಸಭೆಯ ಅಭಿಯಂತರರು, ವಾರ್ಡ್‌ ಸದಸ್ಯರು ಹಾಗೂ ಒಳಚರಂಡಿ ಅಭಿಯಂತರರು ಒಳಚರಂಡಿ ಮ್ಯಾನ್‌ಹೋಲ್ ಸೇರಿದಂತೆ ಕಾಮಗಾರಿಯನ್ನು ಕೂಲಂಕಷವಾಗಿ ಪರಿಶೀಲಿಸಿ 15 ದಿನಗಳಲ್ಲಿ ನನಗೆ ವರದಿ ನೀಡಬೇಕು. ಒಳಚರಂಡಿ ಸೈಟ್ ಎಂಜಿನಿಯರ್ ಜನರ ಕೈಗೆ ಸಿಗುತ್ತಿಲ್ಲ ಎನ್ನುವ ದೂರಿದೆ. ಇದಕ್ಕಾಗಿ ಎಂಜಿನಿಯರ್ ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಪುರಸಭೆ ಆಗಮಿಸಿ ಹಾಜರಿ ಹಾಕಬೇಕು. ಅದರಂತೆ ಒಳಚರಂಡಿ ಅಭಿಯಂತರರು ವಾರದ ಸೋಮವಾರ ಮತ್ತು ಗುರುವಾರ ಬೆಳಗ್ಗೆ ಪುರಸಭೆಯಲ್ಲಿದ್ದು ಒಳಚರಂಡಿ ಕಾಮಗಾರಿಯ ಸಮಸ್ಯೆ ಆಲಿಸಬೇಕು. ಜನರ ದೂರು ಸ್ವೀಕರಿಸಬೇಕು ಎಂದು ತಾಕೀತು ಮಾಡಿದರು.

ಮಾಜಿ ಅಧ್ಯಕ್ಷ ಪರ್ವೇಜ ಕಾಶೀಮಜಿ ಮಾತನಾಡಿ, ಒಳಚರಂಡಿ ಕಾಮಗಾರಿ ಬಗ್ಗೆ ಗಂಭೀರ ಪ್ರಮಾಣದ ಆರೋಪ ಕೇಳಿ ಬಂದ ಹಿನ್ನೆಲೆ ಧಾರವಾಡದಲ್ಲಿರುವ ಮುಖ್ಯ ಎಂಜಿನಿಯರ್ ಅವರನ್ನು ಭಟ್ಕಳಕ್ಕೆ ಕರೆಯಿಸಬೇಕು ಹಾಗೂ ಕಾಮಗಾರಿ ಕಳಪೆ ಬಗ್ಗೆ ವಿಜಿಲೆನ್ಸ್‌ಗೆ ದೂರು ನೀಡುವುದೇ ಉತ್ತಮ ಎಂದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪುರಸಭೆಯ ಅಧಿಕಾರಿಗಳು, ಸದಸ್ಯರಾದ ಕೃಷ್ಣಾನಂದ ಪೈ, ಪಾಸ್ಕಲ್ ಗೋಮ್ಸ, ಜಗನ್ನಾಥ ಗೊಂಡ, ಫಯ್ಯಾಜ್ ಮುಲ್ಲಾ ಮುಂತಾದವರಿದ್ದರು.

ಒಳಚರಂಡಿ ಕಾಮಗಾರಿ ಸರಿಪಡಿಸದಿದ್ದಲ್ಲಿ ಧರಣಿ: ಎಚ್ಚರಿಕೆ

ಭಟ್ಕಳ: ಭಟ್ಕಳ ಪುರಸಭೆಯಲ್ಲಿ ಮಾಡಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ. ಕಾಮಗಾರಿ ಸಮರ್ಪಕವಾಗಿ ಮಾಡದೇ ಇದ್ದಲ್ಲಿ ಪುರಸಭೆ ಎದುರು ಸಂಘ- ಸಂಸ್ಥೆಗಳ ಪ್ರಮುಖರೊಂದಿಗೆ ಪುರಸಭೆಯ ಸದಸ್ಯರು ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾದೀತು ಎಂದು ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಮಜಿ ಎಚ್ಚರಿಸಿದರು.ಸುದ್ದಿಗಾರರ ಜತೆಗೆ ಮಾತನಾಡಿ, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆ ಆಗಿದೆ. ಮ್ಯಾನ್‌ಹೋಲ್‌ಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಕಳಪೆ ಮಟ್ಟದ ಕಾಮಗಾರಿಯಿಂದ ಒಳಚರಂಡಿ ನೀರು ಕುಡಿಯುವ ನೀರಿನ ಬಾವಿಗೆ ಸೇರ್ಪಡೆ ಆಗುವ ಸಾಧ್ಯತೆ ಇದೆ. ಇದರಿಂದ ಜನತೆಗೆ ತೊಂದರೆ ಆಗಲಿದೆ. ಕಾಮಗಾರಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಳಪೆಯಿಂದ ಕೂಡಿದೆ ಎಂದು ನಮ್ಮಲ್ಲಿ ದೂರುತ್ತಿದ್ದಾರೆ ಎಂದರು.ಪುರಸಭೆ ಸದಸ್ಯ ಅಲ್ತಾಪ್ ಖರೂರಿ ಮಾತನಾಡಿ, 2020ರಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಮುಗಿಸಲು ಸಾಧ್ಯವಾಗಿಲ್ಲ. ಒಳಚರಂಡಿ ಮ್ಯಾನಹೋಲ್ ಸೇರಿದಂತೆ ಎಲ್ಲ ಕೆಲಸವೂ ಕಳಪೆ ಆಗಿದೆ. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಬಾವಿಗಳು ಒಳಚರಂಡಿಯಿಂದ ಹಾಳಾಗಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಅಜೀಂ, ಇಮಶ್ಯಾದ್, ಅಬ್ದುಲ್ ರವೂಪ್, ಫಯ್ಯಾಜ್ ಮುಲ್ಲಾ ಮುಂತಾದವರಿದ್ದರು.

Share this article