ನಾಳೆಯಿಂದ ರಂಗಾಯಣದಲ್ಲಿ ನಾಟಕೋತ್ಸವ: ತಾಳಿಕೋಟಿ

KannadaprabhaNewsNetwork |  
Published : Nov 13, 2024, 12:01 AM IST
12ಡಿಡಬ್ಲೂಡಿ4ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿರುವ ನಾಟಕೋತ್ಸವದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.  | Kannada Prabha

ಸಾರಾಂಶ

ರಂಗಾಯಣವು ಹಂತ-ಹಂತವಾಗಿ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ರಂಗಾಯಣವು ನಾಟಕ ಅಕಾಡೆಮಿ ಜತೆಗೂಡಿ ಏಳು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆ ಆಯೋಜಿಸುತ್ತಿದೆ.

ಧಾರವಾಡ:

ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ರಂಗಾಯಣವು ಸಕ್ಕರಿ ಬಾಳಾಚಾರ್‌ (ಶಾಂತಕವಿ) ಟ್ರಸ್ಟ್‌ ಸಹಯೋಗದಲ್ಲಿ ಮೂರು ದಿನಗಳ ಕಾಲ ರಂಗಾಯಣದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ, ನ. 14ರಂದು ಸಂಜೆ 5.30ಕ್ಕೆ ಶಾಂತಕವಿ ಟ್ರಸ್ಟ್‌ ಅಧ್ಯಕ್ಷ ಬಾಬುರಾವ್‌ ಸಕ್ಕರಿ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ನಾಟಕ ಅಕಾಡೆಮಿ ಸದಸ್ಯರಾದ ಗಾಯತ್ರಿ ಹಡಪದ, ರಂಗ ಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಭಾಗವಹಿಸುತ್ತಾರೆ. ಉಪನ್ಯಾಸಕ ಡಾ. ಗುರುನಾಥ ಬಡಿಗೇರ ಶಾಂತಕವಿಗಳ ಬದುಕು-ಬರಹ ಕುರಿತು ಉಪನ್ಯಾಸ ನೀಡುವರು. ನಂತರ ಅನಿಲ ಮೇತ್ರಿ, ಅನುರಾಗ ಸಾಂಸ್ಕೃತಿಕ ಬಳಗದಿಂದ ರಂಗಸಂಗೀತ ನಡೆಯಲಿದೆ ಎಂದರು.

ನ. 14ರಂದು ಸಂಜೆ 6.30ಕ್ಕೆ ಕನ್ನಡಪ್ರಭ ಪುರವಣಿ ಮುಖ್ಯಸ್ಥರಾದ ಜೋಗಿ ರಚನೆಯ ಡಾ. ಪ್ರಕಾಶ ಗರುಡ ನಿರ್ದೇಶನದ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್‌ ಮಾಡೋದು ಏನಕೆ ನಾಟಕವನ್ನು ಗೊಂಬೆ ಮನೆ ಪ್ರಸ್ತುತ ಪಡಿಸಲಿದೆ. ನ. 15ರಂದು ಸಂಜೆ 6.30ಕ್ಕೆ ಭವಭೂತಿ ರಚನೆಯ ಅಕ್ಷರ ಕೆ.ವಿ. ನಿರ್ದೇಶನದ ಮಾಲತಿ ಮಾಧವ ನಾಟಕ ಪ್ರದರ್ಶನಗೊಳ್ಳಲಿದೆ. ನ. 16ರಂದು ಸಂಜೆ 6.30ಕ್ಕೆ ಅಭಿರಾಮ್‌ ಭಡ್ಕಮ್ಕರ್‌ ರಚಿಸಿದ ವಿದ್ಯಾನಿಧಿ ವನಾರಸೆ ನಿರ್ದೇಶನದ ಅಂಕದ ಪರದೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ರಂಗಾಯಣವು ಹಂತ-ಹಂತವಾಗಿ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ರಂಗಾಯಣವು ನಾಟಕ ಅಕಾಡೆಮಿ ಜತೆಗೂಡಿ ಏಳು ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆ ಆಯೋಜಿಸುತ್ತಿದ್ದು ಉತ್ತಮ ನಾಟಕಗಳಿಗೆ ₹ 50 ಸಾವಿರ ಪ್ರಥಮ, ₹ 30 ಸಾವಿರ ದ್ವಿತೀಯ ಹಾಗೂ ₹ 20 ಸಾವಿರ ತೃತೀಯ ಬಹುಮಾನ ನೀಡಲು ಯೋಜನೆ ರೂಪಿಸಿದೆ. ಇದರೊಂದಿಗೆ ಕಂದಗಲ್‌ ಹನುಮಂತರಾಯರ ಹೆಸರಿನಲ್ಲಿ ನಾಟಕ ಶಿಬಿರ ಸಹ ಮಾಡಲು ಯೋಜಿಸಿದ್ದು ಕಂದಗಲ್‌ರಾಯರು ಕಂಡ ಭಾರತ ಹೆಸರಿನಲ್ಲಿ ದೊಡ್ಡ ಯೋಜನೆ ಹೊಂದಿದ್ದು ಶೀಘ್ರ ಅದು ಕಾರ್ಯ ರೂಪಕ್ಕೆ ಬರಲಿದೆ ಎಂದು ಡಾ. ತಾಳಿಕೋಟಿ ಮಾಹಿತಿ ನೀಡಿದರು.

ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಡಾ. ಪ್ರಕಾಶ ಗರುಡ ಸುದ್ದಿಗೋಷ್ಠಿಯಲ್ಲಿದ್ದರು.

ಅನುದಾನಕ್ಕೆ ಕಾಯುತ್ತೇನೆ..

ರಂಗಾಯಣ ನಿರ್ದೇಶಕನಾದ ನಂತರ ಈ ವರೆಗೂ ಇಲಾಖೆ ಸಚಿವರೊಂದಿಗೆ ಒಂದೂ ಸಭೆಯಾಗಿಲ್ಲ. ಹೀಗಾಗಿ ಅನುದಾನ ವಿಳಂಬವಾಗಿದೆ. ₹ 2 ಕೋಟಿ ಅನುದಾನ ಪೈಕಿ ₹ 50 ಲಕ್ಷ ಬಂದಿದ್ದು, ನಿರಂತರ ಕಾರ್ಯಚಟುವಟಿಕೆಗಳು ಮಾತ್ರ ನಡೆಯುತ್ತಿವೆ. ಈ ತಿಂಗಳ ಕೊನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಭೇಟಿ ಮಾಡಿ ಅನುದಾನ ತರುವ ಕುರಿತು ಚರ್ಚಿಸುತ್ತೇನೆ ಎಂದು ಡಾ. ರಾಜು ತಾಳಿಕೋಟಿ ಹೇಳಿದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ