ಕನ್ನಡಪ್ರಭ ವಾರ್ತೆ ಮಂಡ್ಯ
ಭೂಮಿ ಬೆಳಗು ಸಾಂಸ್ಕೃತಿಕ ಸಂಘದಿಂದ ಜ.26, 27ರಂದು ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್ ತಿಳಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಮೊದಲ ಲೋಕಸಭಾ ಸದಸ್ಯ ದಿ.ಎಂ.ಕೆ.ಶಿವನಂಜಪ್ಪ ನೆನಪಿನಾರ್ಥ ರಂಗನಮನ ಕಾರ್ಯಕ್ರಮದಲ್ಲಿ ನಿನಾಸಂನಿಂದ ತಿರುಗಾಟ ನಾಟಕಗಳ ವತಿಯಿಂದ ಮಾಲತಿ ಮಾಧವ ಹಾಗೂ ಅಂಕದ ಪರದೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಜ.26ರ ಸಂಜೆ 6 ಗಂಟೆಗೆ ರಂಗನಮನ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸುವರು. ದಿ.ಎಂ.ಕೆ.ಶಿವನಂಜಪ್ಪ ಅವರ ಕುರಿತು ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ಮಾತನಾಡುವರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ವಿನಯಕುಮಾರ್.ಎಂ ಆಶಯ ನುಡಿಗಳನ್ನಾಡುವರು. ವಿಶ್ರಾಂತ ಹಿರಿಯ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್ ಸಮಾರಂಭದಲ್ಲಿ ಭಾಗವಹಿಸಲಿದ್ದು, ಅಂದು ಮಾಲತಿ ಮಾಧವ ನಾಟಕ ಪ್ರದರ್ಶನ ನಡೆಯಲಿದೆ ಎಂದರು.ಜ.27ರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಪೊಲೀಸ್ ಆರಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸಮಾರೋಪ ಭಾಷಣ ಮಾಡುವರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ದಿ.ಎಂ.ಕೆ.ಶಿವನಂಜಪ್ಪ ಅವರ ಕುರಿತು ಮಾತನಾಡುವರು ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವಿಶ್ರಾಂತ ಪ್ರಾದೇಶಿಕ ಪ್ರಬಂಧಕ ಆನಂದ್ ಸಿ.ಹೆಗಡೆ ಆಶಯ ನುಡಿಗಳನ್ನಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ನೆನಪಿನ ಕಾಣಿಕೆ ವಿತರಣೆ ಮಾಡುವರು. ಯುವ ನಾಯಕ ಗುರುಕುಮಾರ್ ಸಮಾರಂಭದಲ್ಲಿ ಭಾಗವಹಿಸುವರು ಬಳಿಕ ಅಂಕದ ಪರದೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.ಸಂಘದ ಉಪಾಧ್ಯಕ್ಷ ಲಿಂಗಪ್ಪ ಚನ್ನಕೆರೆ, ಸಂಚಾಲಕ ಡಿ.ನಂಜುಂಡಸ್ವಾಮಿ, ಎಂ.ಎನ್.ರಾಜೇಶ್, ಹರೀಶ್ ಬಾಣಸವಾಡಿ ಗೋಷ್ಠಿಯಲ್ಲಿದ್ದರು.