ಕೆರೆಗಳ ಹೂಳೆತ್ತಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

KannadaprabhaNewsNetwork | Published : Mar 12, 2025 12:45 AM

ಸಾರಾಂಶ

ಮಳೆಗಾಲ ಪ್ರಾರಂಭದ ವೇಳೆಗೆ ಕೆರೆಗಳ ಹೂಳೆತ್ತುವ, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ನೆಲ-ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನದ ಬಲ್ಲೂರು ರವಿಕುಮಾರ ಒತ್ತಾಯಿಸಿದರು.

- ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು: ಬಲ್ಲೂರು ರವಿಕುಮಾರ ಆಗ್ರಹ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಮಳೆಗಾಲ ಪ್ರಾರಂಭದ ವೇಳೆಗೆ ಕೆರೆಗಳ ಹೂಳೆತ್ತುವ, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ನೆಲ-ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನದ ಬಲ್ಲೂರು ರವಿಕುಮಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮಳೆಗಾಲದ ಹೊತ್ತಿಗೆ ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗುವುದು. ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

ರಾಜ್ಯದ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳ ಹೂಳೆತ್ತುವ ಮೂಲಕ ಶೇ.40 ನೀರು ದೊರೆಯುತ್ತದೆ. ನೀರಿನ ಸಮಸ್ಯೆ ಆಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಮನಕ್ಕೆ ತರಲಾಗಿದೆ ಎಂದರು.

ಕಳೆದೊಂದು ವರ್ಷದಿಂದ ನಡೆಸುತ್ತಿರುವ ಹೋರಾಟ ಫಲವಾಗಿ ದಾವಣಗೆರೆ ಜಿಲ್ಲೆಯ 538 ಕೆರೆಗಳಲ್ಲಿ ಒಟ್ಟು 47 ಕೆರೆಗಳ ಹೂಳೆತ್ತಲು ಕಾರ್ಯಾದೇಶ ನೀಡಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಕೆರೆಗಳ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಎರಡು ಕೆರೆಗಳ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಕಡ್ಡಾಯವಾಗಿ ಕೆರೆಗಳ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಶಾಸಕರ ಮನೆಗಳ ಮುಂದೆ ಹೋರಾಟ ಮಾಡಿ, ಘೇರಾವ್ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮತ್ತು ಅಧಿಕಾರಿಗಳ ಮನೆಗಳಲ್ಲಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಬೇಕು. ಇದರಿಂದ ನೀರಿನ ಉಳಿತಾಯವೂ ಆಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಂಜಿನಪ್ಪ ಪೂಜಾರ್, ಮೀಯಾಪುರ ತಿರುಮಲೇಶ್, ಪ್ರವೀಣ, ಕರಿಬಸಪ್ಪ, ಮಾಯಕೊಂಡ ಅಶೋಕ, ಇತರರು ಇದ್ದರು.

- - - -10ಕೆಡಿವಿಜಿ33:

ದಾವಣಗೆರೆಯಲ್ಲಿ ಬಲ್ಲೂರು ರವಿಕುಮಾರ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾದ್ಯಂತ ಕೆರೆಗಳ ಹೂಳೆತ್ತುವ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿದರು.

Share this article