ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 53 ಕಿಮೀ ಉದ್ದದ ರಾಜಕಾಲುವೆಗಳ ಹೂಳು ತೆಗೆಯುವ ಕೆಲಸ ಒಂದೂವರೆ ತಿಂಗಳೊಳಗೆ ನಡೆಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.ಸಾರ್ವಜನಿಕರ ಅಹವಾಲು ಆಲಿಸುವ ಮೇಯರ್ ಫೋನ್- ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾಲುವೆಗಳ ಹೂಳು ತೆಗೆಯಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಟೆಂಡರ್ ಕರೆದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.ಕಾವೂರು ಕೆರೆಗೆ ತ್ಯಾಜ್ಯ: ಕಾವೂರು ಕೆರೆಗೆ ಪಕ್ಕದ ಹಂದಿ ಸಾಕಣೆ ಕೇಂದ್ರದಿಂದ ತ್ಯಾಜ್ಯ ನೀರು ಹರಿಯುತ್ತಿದ್ದು, ಕೆರೆ ನೀರು ಕಲುಷಿತವಾಗಿದೆ. ಹಲವು ಬಾರಿ ಹೇಳಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು. ಪ್ರತಿಕ್ರಿಯಿಸಿದ ಮೇಯರ್, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಾವೂರಲ್ಲಿ ಬೀದಿ ದೀಪದ ಕಂಬ ಹಾಕಿದರೂ ದೀಪ ಅಳವಡಿಸಿಲ್ಲ ಎಂದು ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರು.ಬೀದಿಬದಿ ಆಹಾರ ಮೇಲೆ ನಿಗಾ: ಕಂಕನಾಡಿಯ ಜೋಸೆಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೀದಿ ಬದಿಗಳಲ್ಲಿ ಸಂಜೆ ವೇಳೆ ಫಾಸ್ಟ್ ಫುಡ್, ತಿಂಡಿ ವ್ಯಾಪಾರ ಹೆಚ್ಚಿದ್ದು, ಸ್ವಚ್ಛತೆಯ ಕುರಿತು ಆತಂಕ ಉಂಟಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಪ್ರತಿ ವಾರ್ಡ್‌ನಲ್ಲಿ ವ್ಯಾಪಾರ ವಲಯ ನಿರ್ಮಿಸಲಾಗುವುದು. ಅದರ ಬಳಿಕ ಇತರ ಪ್ರದೇಶಗಳಲ್ಲಿ ವ್ಯಾಪಾರ ಮಾಡುವವರ ವಿರುದ್ಧ ಟೈಗರ್ ಕಾರ್ಯಾಚರಣೆ ನಡೆಸಿ ನಿಗ್ರಹಿಸಲಾಗುವುದು ಎಂದು ತಿಳಿಸಿದರು.ಮುಕ್ಕ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಫಿಶ್ ಮಿಲ್‌ನಿಂದ ಕೊಳಕು ನೀರು ಸಮುದ್ರ ಸೇರುತ್ತಿದೆ. ಈ ಹಿಂದೆ ಮೇಯರ್‌ಗೆ ಪತ್ರ ಬರೆದಿದ್ದರೂ ಕ್ರಮ ಆಗಿಲ್ಲ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೇಯರ್ ಹೇಳಿದರು.ಕಪಿತಾನಿಯೊ ಬಳಿಯ ಸೈಮನ್ ಲೇನ್‌ನಲ್ಲಿ ಮನೆ ಪಕ್ಕದ ಕಂಪೌಂಡ್ ಬಿದ್ದಿದ್ದು ದೂರು ನೀಡಿದರೂ ಸರಿಪಡಿಸಿಲ್ಲ ಎಂದು ಸ್ಥಳೀಯ ನಿವಾಸಿ ಸೋಫಿಯಾ ಗಮನ ಸೆಳೆದರು. ಅದು ಖಾಸಗಿ ಜಾಗ ಆಗಿದ್ದರೆ ಪಾಲಿಕೆ ವತಿಯಿಂದ ಕಂಪೌಂಡ್ ನಿರ್ಮಾಣ ಕಷ್ಟ, ಸಾರ್ವಜನಿಕ ಜಾಗದಲ್ಲಿದ್ದರೆ ಸೂಕ್ತ ಪರಿಹಾರ ಕಾರ್ಯ ನಡೆಸಿಕೊಡುವುದಾಗಿ ಮೇಯರ್ ತಿಳಿಸಿದರು.ಆಡುಮರೋಳಿಯಲ್ಲಿ ಎಲ್ಲ ಜಾಗ ಸಿಂಗಲ್ ಸೈಟ್ ಆಗಿದ್ದರೂ ರಸ್ತೆ ಮಾತ್ರ 8 ಮೀ. ಮಾತ್ರ ಅಗಲವಿದೆ. ಅದನ್ನು ಇನ್ನಷ್ಟು ಅಗಲೀಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂತು. ಅಧಿಕಾರಿಗಳು ಭೇಟಿ ನೀಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮೇಯರ್ ಹೇಳಿದರು.28 ದೂರುಗಳು: ಉಳಿದಂತೆ ನೀರಿನ ಸಮಸ್ಯೆ, ಬೀದಿದೀಪ, ರಸ್ತೆ ತೇಪೆ, ಡಾಂಬರೀಕರಣ ಇತ್ಯಾದಿ ಒಟ್ಟು 28 ದೂರುಗಳನ್ನು ಸಾರ್ವಜನಿಕರು ಹೇಳಿಕೊಂಡಿದ್ದು, ಮೇಯರ್ ಸೂಕ್ತ ಉತ್ತರ ನೀಡಿದರು. ಕಳೆದ ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ 27 ದೂರುಗಳ ಪೈಕಿ 22 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.ಬಾಕ್ಸ್‌ತ್ಯಾಜ್ಯ ಸಂಗ್ರಹ ವಾಹನಗಳಿಗೆ ಚಾಲಕ, ಕಾರ್ಮಿಕರ ಶೀಘ್ರ ನೇಮಕಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ನೂತನ 153 ವಾಹನಗಳಿಗೆ ಚಾಲಕರು ಮತ್ತು ಕಾರ್ಮಿಕರ ಹುದ್ದೆ ಭರ್ತಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರ ಭರ್ತಿ ಮಾಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.153 ವಾಹನಗಳ ಪೈಕಿ 117 ವಾಹನಗಳು ಕಾರ್ಯಾಚರಿಸುತ್ತಿದ್ದು, ಈ ಹಿಂದಿನ ತ್ಯಾಜ್ಯ ಸಂಗ್ರಹದ ಗುತ್ತಿಗೆ ಸಂಸ್ಥೆ ಆಂಟನಿ ವೇಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿ ಚಾಲಕರು, ಕಾರ್ಮಿಕರನ್ನು ನಿಯೋಜಿಸಲಾಗುವುದು. ಅದೇ ರೀತಿ ಈ ವಾಹನಗಳ ನಿರ್ವಹಣೆಗೂ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.