ಮಾನ್ಯರ ಮಸಲವಾಡದಲ್ಲಿ ಕಲುಷಿತ ನೀರು ಸೇವನೆ

KannadaprabhaNewsNetwork |  
Published : Jun 17, 2025, 06:00 AM IST
ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಕೊಳವೆ ಬಾವಿಯ ಸುತ್ತ ಕಸ ಗಿಡ ಗಂಟೆಗೆ ಬೆಳೆದಿರುವುದು.ವಿವಿಧ ಕಡೆಗಳಲ್ಲಿ ವೈದ್ಯ ಡಾ.ಕಾರ್ತಿಕ್‌ ನೀರು ಪೂರೈಕೆಯ ವಾಲ್‌ಗಳನ್ನು ಪರಿಶೀಲನೆ ಮಾಡಿದರು.ತಹಸೀಲ್ದಾರ್‌ ಸಂತೋಷಕುಮಾರ್ ಭೇಟಿ ನೀಡಿ ಪಿಡಿಒಗೆ ನೀರು ಪೂರೈಕೆ ಬಗ್ಗೆ ಸೂಚನೆಗಳನ್ನು ನೀಡಿದರು. | Kannada Prabha

ಸಾರಾಂಶ

ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ, 20 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

20 ಜನ ಆಸ್ಪತ್ರೆಗೆ ದಾಖಲು, ತಿಪ್ಪೆಗುಂಡಿಯಲ್ಲಿ ಪೈಪ್‌ಲೈನ್‌ ಸೋರಿಕೆಗಮನ ಹರಿಸದ ಗ್ರಾಪಂ ಅಧಿಕಾರಿಗಳು

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ, 20 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ವಡ್ಡರಗೇರಿಯಲ್ಲಿ 13 ಜನ ಮತ್ತು ಕುರಬಗೇರಿ ಓಣಿಯಲ್ಲಿ 7 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ರೋಗಿಗಳು ಹೂವಿನಹಡಗಲಿಯ ಅನನ್ಯ ಆಸ್ಪತ್ರೆಯಲ್ಲಿ ಪವಿತ್ರ, ಕೆಂಚಮ್ಮ, ನಿಂಗರಾಜ ಇವರು ಚಿಕಿತ್ಸೆ ಪಡೆಯುತ್ತಿದ್ದರೇ, ಇತ್ತ ದಾ‍ವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ರಾಧಿಕಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಉಳಿದಂತೆ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಾರದ, ಅನಲಮ್ಮ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳಿದವರು ವಿವಿಧ ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮ 3 ಸಾವಿರ ಜನಸಂಖ್ಯೆ ಹೊಂದಿದೆ. ಇಡೀ ಗ್ರಾಮಕ್ಕೆ ಒಂದು ಶುದ್ಧ ಕುಡಿವ ನೀರಿನ ಘಟಕವಿದೆ. ಉಳಿದಂತೆ ಗ್ರಾಮದ ವ್ಯಾಪ್ತಿಯಲ್ಲಿ 5 ಕೊಳವೆ ಬಾವಿಗಳಿಂದ ಮನೆಗಳಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. 2 ಕೊಳವೆ ಬಾವಿಗಳು ಕೆರೆಯಂಗಳದಲ್ಲಿವೆ. ಉಳಿದಂತೆ ಗ್ರಾಮದ ವಿವಿಧ ಕಡೆಗಳಲ್ಲಿರುವ ಕೊಳವೆ ಬಾವಿಗಳಿಂದ ನೀರು ಸರಬರಾಜು ಆಗುತ್ತಿದೆ.

ಶುದ್ಧ ಕುಡಿವ ನೀರು ಕುಡಿದರೇ ಕೈ ಕಾಲು ನೋವು ಬರುತ್ತದೆ ಎಂದು ನಂಬಿಕೊಂಡು, ವಡ್ಡರಗೇರಿ, ಕುರಬಗೇರಿ ಜನ ಇಂದಿಗೂ ಕೊಳವೆ ಬಾವಿಯ ನೀರನ್ನೇ ಕುಡಿಯುತ್ತಿದ್ದಾರೆ. ಆ ಕೊಳವೆ ಬಾವಿಯ ಪೈಪ್‌ಲೈನ್‌ ತಿಪ್ಪೆಗುಂಡಿಯಲ್ಲಿ ಸೋರಿಕೆಯಾಗುತ್ತಿದೆ. ಜತೆಗೆ ಒಂದು ಕೊಳವೆಯು ನೆಲ ಮಟ್ಟದಲ್ಲೇ ಇರುವ ಕಾರಣ, ಪಕ್ಕದ ಗುಂಡಿಯಲ್ಲಿನ ಕಲುಷಿತ ನೀರು ಕೊಳವೆ ಬಾವಿ ಸೇರುತ್ತಿದೆ. ಅದೇ ನೀರು ಗ್ರಾಮಕ್ಕೆ ಪೊರೈಕೆಯಾಗಿದೆ. ಜನ ಆ ಕಲುಷಿತ ನೀರು ಕುಡಿದು ವಾಂತಿ ಭೇದಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕೊಳವೆ ಬಾವಿ ಸುತ್ತಲೂ ಗಡಿ ಗಂಟೆಗಳು ಬೆಳೆದಿವೆ. ಇದರ ಪಕ್ಕದಲ್ಲೇ ಮಳೆ ನೀರು ನಿಲ್ಲುವ ದೊಡ್ಡ ಗುಂಡಿ ಇದೆ. ಈ ಗುಂಡಿಯಲ್ಲಿನ ಕಲುಷಿತ ನೀರು ಕೊಳವೆ ಬಾವಿ ಸೇರುತ್ತಿದೆ. ಇದೇ ನೀರನ್ನೇ ಗ್ರಾಮಕ್ಕೆ ಗ್ರಾಪಂ ನೀರು ಸರಬರಾಜು ಮಾಡುತ್ತಿದೆ. ನೀರು ಪರೀಕ್ಷೆ ಸೇರಿದಂತೆ ನೀರು ಸುರಕ್ಷತೆಯ ಮುಂಜಾಗ್ರತಾ ಕ್ರಮ ಕೈಕೊಂಡಿಲ್ಲ, ಕೊಳವೆ ಬಾವಿ ಸುತ್ತಮುತ್ತ ಸ್ವಚ್ಛತೆ ಮಾಡಬೇಕೆಂಬ ಪರಿಜ್ಞಾನವೂ, ಗ್ರಾಪಂ ಪಿಡಿಒಗೆ ಇಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲೂಕಿನ ಮರಕಬ್ಬಿ ಗ್ರಾಮದಲ್ಲಿ ಕಳೆದ 2021ರಲ್ಲಿ ಕಲುಷಿತ ನೀರು ಸೇವನೆ ಮಾಡಿ 7 ಜನ ಮೃತರಾಗಿದ್ದರು. ಆ ಸಂದರ್ಭ ಜಿಲ್ಲಾಡಳಿತ ಕುಡಿವ ನೀರಿನ ಬಗ್ಗೆ ಹೊರಡಿಸಿದ ಮುಂಜಾಗ್ರತಾ ಕ್ರಮಗಳನ್ನು ಆಯಾ ಗ್ರಾಪಂ ಪಿಡಿಒಗಳು ಆ ಕ್ಷಣಕ್ಕೆ ಮಾತ್ರ ಕೈಗೊಂಡಿದ್ದರು. ನಂತರ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಜನ ವಾಂತಿ ಭೇದಿಯಿಂದ ಬಳಲುವಂತಾಗಿದೆ. ಗ್ರಾಮದಲ್ಲಿ ನೀರು ಬಿಡಲು ಅಳವಡಿಸಿದ ವಾಲ್‌ಗಳಲ್ಲಿಯೂ ಕಲುಷಿತ ನೀರಿದೆ. ಇದನ್ನು ಸ್ವಚ್ಛ ಮಾಡಿಲ್ಲ, ಕೆಲವಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆಯಾಗುತ್ತಿದ್ದರೂ ದುರಸ್ತಿ ಮಾಡಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುದ್ಧ ಕುಡಿವ ನೀರು ಕುಡಿಯಲು ಬಳಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಪಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ್ದಾರೆ. ಕಲುಷಿತ ನೀರು ಸೇರಿದ ಕೊಳವೆ ಬಾವಿಯ ನೀರಿನ ಪೂರೈಕೆಯನ್ನು ಬಂದ್‌ ಮಾಡಿದ್ದೇವೆ. ಉಳಿದ 4 ಕೊಳವೆ ಬಾವಿಗಳ ನೀರು ಸರಬರಾಜು ಮಾಡುತ್ತಿದ್ದೇವೆ. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ನೀರಿನ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಪಂ ಪಿಡಿಒ ಮಹಮದ್‌ ರಫಿ ಹೇಳಿದ್ದಾರೆ.

ಮಾನ್ಯರ ಮಸಲವಾಡ ಗ್ರಾಮಕ್ಕೆ ತಹಸೀಲ್ದಾರ್‌ ಜಿ.ಸಂತೋಷಕುಮಾರ ಭೇಟಿ ನೀಡಿ, ಗ್ರಾಪಂ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಮಾಹಿತಿ ನೀಡಿದರು.

ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾದ ನೀರನ್ನು ಕುಡಿದ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ 3 ಜನ ಗುಣಮುಖರಾಗಿದ್ದಾರೆ. ಗ್ರಾಪಂ ಅಧಿಕಾರಿಗಳಿಗೆ ದುರಸ್ತಿ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಮಾನ್ಯರ ಮಸಲವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಕಾರ್ತಿಕ್‌ ಹೇಳಿದರು.

ಇನ್ನು ಟಿಎಚ್‌ಒ ಸಪ್ನಾ ಕಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!