ಮಂಜುನಾಥ ಕೆ.ಎಂ.
ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್ ಅಳವಡಿಕೆಯಿಂದಾಗಿ ರೈತರಿಗೆ ಬೇಸಿಗೆ ಬೆಳೆಗೆ ನೀರು ಕೊಡಲಿಲ್ಲ. ಹೀಗಾಗಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಕುಡಿವ ನೀರಿಗೆ ಅಭಾವ ಬರುವ ಸಾಧ್ಯತೆಯಿಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟೋಕ್ತಿ. ಆದರೆ, ಪರಿಸ್ಥಿತಿ ಹಾಗಿಲ್ಲ. ಕುಡಿವ ನೀರಿನ ಸಮಸ್ಯೆ ಈಗಾಗಲೇ ಜಿಲ್ಲೆಯಲ್ಲಿ ತಲೆದೋರಿದೆ. ಕಡು ಬೇಸಿಗೆಯಿಂದ ಜಲಮೂಲಗಳು ಬತ್ತುತ್ತಿರುವುದರಿಂದ ನೀರಿಗಾಗಿ ಜನ-ಜಾನುವಾರುಗಳ ಪರದಾಟ ಶುರುವಾಗಿದೆ.
ಏತನ್ಮಧ್ಯೆ, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳ ದುರಸ್ತೀಕರಣದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡರೆ ಮಾತ್ರ ಕಾಲುವೆಯಿಂದ ನೀರು ಪಡೆದುಕೊಂಡು ಬಳ್ಳಾರಿ ನಗರ ಹಾಗೂ ಇತರೆ ಗ್ರಾಮೀಣ ಪ್ರದೇಶಗಳಿಗೆ ಪೂರೈಕೆಗೆ ಸಾಧ್ಯವಿದೆ. ಆದರೆ, ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಹೇಳಿಕೆ ಪ್ರಕಾರ ಕಾಲುವೆಗಳ ಕಾಮಗಾರಿ ಏಪ್ರಿಲ್ ಎರಡನೇ ವಾರದವರೆಗೆ ಮುಂದುವರಿಯಲಿದೆ.ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಪಾಲಿನ ಕುಡಿವ ನೀರು ಪೂರೈಕೆ ಮಾಡಬೇಕಾಗಿರುವುದರಿಂದ ಏಪ್ರಿಲ್ ಕೊನೆಯ ವಾರದೊಳಗೆ ಕಾಲುವೆಯಲ್ಲಿ ನೀರು ಹರಿಯುವ ಸಾಧ್ಯತೆಯಿದೆ. ಕಾಲುವೆಗೆ ನೀರು ಪೂರೈಕೆ ವಿಳಂಬವಾದರೆ ನೀರಿನ ಸಮಸ್ಯೆ ತೀವ್ರಗೊಳ್ಳುವ ಆತಂಕವಿದೆ.
10 ದಿನಕ್ಕೊಮ್ಮೆ ನೀರು: ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದರೂ ಬಳ್ಳಾರಿ ಜನರಿಗೆ 10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ವೇಳೆ 85 ಎಂಎಲ್‌ಡಿ ನೀರು ಸರಬರಾಜು ಆಗುತ್ತಿತ್ತು. ಆದರೆ, ಇದೀಗ 65ಎಂಎಲ್‌ಡಿ ಇಳಿಕೆ ಮಾಡಿದ್ದರಿಂದಾಗಿ ಕಳೆದ 15 ದಿನಗಳಿಂದ ನಗರದ ಜನರಿಗೆ 10 ದಿನಕ್ಕೊಮ್ಮೆ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಕೆಯ ನಿರ್ಧಾರ ಪಡೆದುಕೊಳ್ಳಲಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದೆ ನಿಜ. ಆದರೆ, ವಾರಕ್ಕೊಮ್ಮೆ ನೀರು ಪೂರೈಸಿದರೆ ಮುಂದೆ ನೀರಿನ ಕೊರತೆ ಎದುರಾದರೆ ಹೇಗೆ? ಒಂದು ವೇಳೆ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ಆಂಧ್ರ ಕೋಟಾದ ನೀರು ಬಿಟ್ಟರೆ, ಕುಡಿವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಕಾಮಗಾರಿ ತೀರಾ ವಿಳಂಬವಾದರೆ ಹೇಗೆ ? ಎಂಬ ಆತಂಕವಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಖಾಸಗಿ ಟ್ಯಾಂಕರ್ ಮೊರೆ: ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಹೋಟೆಲ್, ಲಾಡ್ಜ್, ಆಸ್ಪತ್ರೆ ಸೇರಿದಂತೆ ನಾನಾ ಕಡೆ ಟ್ಯಾಂಕರ್ ಗಳ ನೀರು ಬಳಕೆ ಮಾಡಲಾಗುತ್ತಿದೆ. ವಾಣಿಜ್ಯ ಚಟುವಟಿಕೆಗಳಿಗೆ ಪಾಲಿಕೆ ಪೂರೈಕೆ ಮಾಡುವ ನೀರು ಸಾಕಾಗುತ್ತಿಲ್ಲ. ದುಬಾರಿಯಾದರೂ ಟ್ಯಾಂಕರ್ ನೀರು ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಹೋಟೆಲ್ ಮಾಲೀಕರು.
ಚರಂಡಿ ನೀರು ಮಿಶ್ರಿತ: ನಗರದಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗುತ್ತಿದೆ. ಪಾಲಿಕೆ ಆಡಳಿತ ಅಗತ್ಯ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಅನೇಕ ಹೋರಾಟಗಳು ನಡೆದಿವೆ. ಕಲುಷಿತ ನೀರು ನಿಯಂತ್ರಣಕ್ಕೆ ಪಾಲಿಕೆ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿದೆ. 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವಾಗಲಾದರೂ ನೀರು ಶುದ್ಧೀಕರಣಕ್ಕೆ ಗಮನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮ ವಹಿಸಿದ್ದೇವೆ. ಇದರಿಂದ ಶೇ.10ರಷ್ಟು ನೀರು ಉಳಿಕೆಯಾಗಲಿದೆ. ಸ್ವಿಮ್ಮಿಂಗ್ ಪೂಲ್, ಹೋಟೆಲ್, ಬಾರ್ ಮತ್ತಿತರ ಕಡೆಗಳಿಗೆ ಹೆಚ್ಚುವರಿಯಾಗಿ ನೀರು ಪೂರೈಕೆ ನಿಯಂತ್ರಿಸಲಾಗಿದೆ. ಸಾರ್ವಜನಿಕರು ವಿನಾಕಾರಣ ನೀರು ವ್ಯರ್ಥ ಮಾಡದೇ ಮಿತವಾಗಿ ಬಳಸುವಂತಾಗಬೇಕು ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ.