100 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

KannadaprabhaNewsNetwork | Published : Oct 28, 2023 1:15 AM

ಸಾರಾಂಶ

ಮುಂಗಾರು- ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರ ಸಂಕಷ್ಟ ಹೇಳತೀರದಾಗಿದೆ. ಬೆಳೆಹಾನಿ ಜತೆಗೆ ಜೀವಜಲಕ್ಕೂ ತತ್ವಾರ ಉಂಟಾಗಿದ್ದು, ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಬರ ಎದುರಿಸುತ್ತಿವೆ.

ಬಿ. ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿಮುಂಗಾರು- ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರ ಸಂಕಷ್ಟ ಹೇಳತೀರದಾಗಿದೆ. ಬೆಳೆಹಾನಿ ಜತೆಗೆ ಜೀವಜಲಕ್ಕೂ ತತ್ವಾರ ಉಂಟಾಗಿದ್ದು, ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಬರ ಎದುರಿಸುತ್ತಿವೆ.ಬರ ಘೋಷಣೆಯಾಗಿ ಸುಮಾರು ದಿನಗಳೇ ಕಳೆದರೂ ಬೆಳೆಹಾನಿ ಪರಿಹಾರ ಬಂದಿಲ್ಲ. ಅಲ್ಲದೇ ಬರ ಪರಿಹಾರ ಕಾಮಗಾರಿಯನ್ನೂ ಆರಂಭಿಸಿಲ್ಲ. ಈ ನಡುವೆ ತಾಲೂಕಿನಲ್ಲಿ ಅಳಗಂಚಿಕೇರಿ, ಬಾಪೂಜಿ ನಗರ, ನಿಲುವಂಜಿ, ಇಟ್ಟಿಗುಡಿ, ಯು. ಕಲ್ಲಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.ನಂದಿಬೇವೂರು, ಕಣವಿಹಳ್ಳಿ, ಕೊಂಗನಹೊಸೂರು, ಉಚ್ಚಂಗಿದುರ್ಗ ಕೋಟೆ ಕ್ಯಾಂಪ್‌, ಕರಡಿ ದುರ್ಗ, ತಿಪ್ಪನಾಕನಹಳ್ಳಿ, ಎನ್‌. ಶೀರನಹಳ್ಳಿ, ಅಲಮರಸಿಕೇರಿ, ತೊಗರಿಕಟ್ಟೆ, ಯಲ್ಲಾಪುರ, ತೊಗರಿಕಟ್ಟೆ, ಮಾದಿಹಳ್ಳಿ, ಹಗರಿಗುಡಿಹಳ್ಳಿ, ಜಂಗಮತುಂಬಿಗೇರಿ, ಅಣಜಿಗೇರಿ, ಮಾಡಲಗೇರಿ, ಹುಲ್ಲಿಕಟ್ಟಿ, ಹಾರಕನಾಳು ಸಣ್ಣ ತಾಂಡ, ಮತ್ತಿಹಳ್ಳಿ, ಚೆನ್ನಹಳ್ಳಿ, ಹೊನ್ನೇನಹಳ್ಳಿ, ನಿಟ್ಟೂರು ಬಸ್ಸಾಪುರ, ಜೋಷಿಲಿಂಗಾಪುರ, ಕೂಲಹಳ್ಳಿ, ಬಾಗಳಿ, ಡಗ್ಗಿಬಸ್ಸಾಪುರ, ಹಂಪಾಪುರ, ಕುಂಚೂರು, ಕ್ಯಾರಕಟ್ಟಿ, ಗೌರಿಪುರ ಶಿವಪುರ ಸೇರಿದಂತೆ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿರುವ ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿ ವತಿಯಿಂದ ಕುಡಿಯುವ ನೀರಿನ ಸಮಸ್ಯೆಗಳುಳ್ಳ ಹಳ್ಳಿಗಳ ಪಟ್ಟಿ ತಯಾರಿಸಿ ₹4.94 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಿಕೊಡಲಾಗಿದೆ.

ಕೊಳವೆ ಬಾವಿ ಕೊರೆಯವುದು, ಪಂಪ್‌ ಮೋಟಾರ್‌ ಹಾಗೂ ಪೈಪ್‌ಲೈನ್‌ ಅಳವಡಿಸುವುದು ಮುಂತಾದ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧವಾಗಿದೆ. ಆದರೆ ಅನುದಾನ ಮಾತ್ರ ಈವರೆಗೂ ಬಿಡುಗಡೆಗೊಂಡಿಲ್ಲ.

₹24.50 ಲಕ್ಷ ಅನುದಾನ:

ಅಳಗಂಚಿಕೇರಿ, ಬಾಪೂಜಿ ನಗರ, ನಿಲುವಂಜಿ, ಇಟ್ಟಿಗುಡಿ, ಅರಸಿಕೇರಿ, ಯು. ಕಲ್ಲಹಳ್ಳಿ ಹೀಗೆ ಆರು ಗ್ರಾಮಗಳಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ₹24.50 ಲಕ್ಷ ಅನುದಾನ ಅನುಮೋದನೆಗೊಂಡಿದೆ. ಶೀಘ್ರ ಆ ಗ್ರಾಮಗಳಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಕಿರಣ ನಾಯ್ಕ ಹೇಳುತ್ತಾರೆ.

ಯು. ಕಲ್ಲಹಳ್ಳಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗೆ ಜಮೀನುಗಳಲ್ಲಿಯ ಬೋರ್‌ಗಳಿಗೆ ಸಾಕಷ್ಟು ದೂರ ಹೋಗಬೇಕಿದೆ. ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶಿಕ್ಷಕರು, ಅಡುಗೆದಾರರು ನೀರಿಗಾಗಿ ಹರಸಾಹಸ ಪಡಬೇಕಿದೆ. ದೂರದ ಕೆರೆ ಬಳಿ ಇರುವ ಬೋರ್‌ಗೆ ಹೋಗಿ ತರಬೇಕಾಗಿದೆ.

ಬೆಳೆಗಳನ್ನು ಕಳೆದುಕೊಂಡು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬೆಳೆ ಪರಿಹಾರ ಇನ್ನೂ ಬಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎಂಬುದು ಕೂಲಿಕಾರರ ಬೇಡಿಕೆಯಾಗಿದೆ. ಆದ್ದರಿಂದ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಬರದಲ್ಲಿ ರೈತರ, ಕೂಲಿಕಾರರ ಕಣ್ಣೀರು ಒರೆಸುವ ಕೆಲಸವನ್ನು ಕೂಡಲೇ ಮಾಡಬೇಕು ಎಂಬ ನಿರೀಕ್ಷೆಯಾಗಿದೆ.ಬೆಳೆಹಾನಿ ವರದಿ ಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಬರಪೀಡಿತ ತಾಲೂಕು ಘೋಷಣೆಯಾದ ನಂತರ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ತಹಸೀಲ್ದಾರ್‌ ಗಿರೀಶ ಬಾಬು.

Share this article