ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬೇಸಿಗೆಯಲ್ಲಿ ನೀರು ಪೂರೈಕೆ ಸಮಸ್ಯೆಯಾಗದಂತೆ ಎಲ್ಲ ಕ್ರಮಕೈಗೊಳ್ಳಲಾಗುತ್ತಿದ್ದು, ಗರಿಷ್ಠ 6 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಪಾಲಿಕೆ ಮೇಯರ್ ವೀಣಾ ಬರದ್ವಾಡ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಭಯ ನೀಡಿದ್ದಾರೆ. ಕುಡಿಯುವ ನೀರಿನ ಸಂಪರ್ಕ ಹೊಂದಲು ಹಾಗೂ ದೂರುಗಳನ್ನು ಹೇಳಿಕೊಳ್ಳಲು ಏಕಗವಾಕ್ಷಿ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಈ ನಡುವೆ ಸರಿಯಾಗಿ ವ್ಯವಸ್ಥೆ ಮಾಡದ ಎಲ್‌ಆ್ಯಂಡ್ ಟಿ ಕಂಪನಿ ಅಧಿಕಾರಿಗಳನ್ನು ಪಕ್ಷಾತೀತವಾಗಿ ಸದಸ್ಯರೆಲ್ಲರೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ನಗರದ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಡೆದ ತುರ್ತು ಸಭೆಯಲ್ಲಿ ಕಾರ್ಪೋರೇಟರ್‌ಗಳಿಗೆ ಈ ಭರವಸೆ ನೀಡಿದರು.
ಕುಡಿಯುವ ನೀರಿನ ಅತ್ಯಂತ ಗಂಭೀರ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ನೀರು ಪೂರೈಕೆ ಟ್ಯಾಂಕರ್‌ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲಾಗುವುದು. ಕೆಟ್ಟ ಬೋರವೆಲ್‌ಗಳನ್ನು 3 ದಿನಗಳಲ್ಲಿ ದುರಸ್ತಿ ಗೊಳಿಸಿ ಅನುಕೂಲ ಮಾಡುತ್ತೇವೆ. ಸಮಸ್ಯೆ ಎದುರಾದರೆ ಗಮನಕ್ಕೆ ತರಬೇಕು. ನಾಲ್ಕು ತಾಸುಗಳಲ್ಲಿ ಪರಿಹರಿಸುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.ಪೈಪ್‌ಲೈನ್ ಒಡೆದು ನೀರು ಪೋಲಾಗುವುದನ್ನು ಸಹಿಸುವುದಿಲ್ಲ. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ವಲಯವಾರು ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್‌ಆ್ಯಂಡ್‌ಟಿ ಸಿಬ್ಬಂದಿ ತರಾಟೆಗೆಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಚರ್ಚಿಸಲು ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಸದಸ್ಯರು ಎಲ್ ಆ್ಯಂಡ್ ಟಿ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ರಾತ್ರಿ 1 ರಿಂದ ಬೆಳಗಿನ ವರೆಗೂ ನೀರು ಪೂರೈಸಲಾಗುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಯಾಗುತ್ತಿದೆ ಎಂದು ಜನರ ತೊಂದರೆಗಳನ್ನು ಸದಸ್ಯರು ಬಿಚ್ಚಿಟ್ಟರು.ಬಹಳಷ್ಟು ಕಡೆಗಳಲ್ಲಿ ನೀರಿನ ಒತ್ತಡ ಬಹಳ ಕಡಿಮೆಯಾಗುತ್ತಿದೆ. ಅಧಿಕಾರಿಗಳು ಆಫೀಸ್‌ನಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದು, ಯಾರೂ ಫೀಲ್ಡ್‌ನಲ್ಲಿ ಸಮಸ್ಯೆ ಏನಿದೆ ಎನ್ನುವುದನ್ನು ತಿಳಿದುಕೊಂಡಿಲ್ಲ ಎಂದು ಅಧಿಕಾರಿಗಳ ಉದಾಸೀನ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್‌ವಾರು ಸದಸ್ಯರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು.
ಏಕಗವಾಕ್ಷಿ ಪದ್ಧತಿ:ಕುಡಿಯುವ ನೀರಿನ ಸಂಪರ್ಕ ಹೊಂದಲು ಹಾಗೂ ದೂರು ಹೇಳಿಕೊಳ್ಳಲು ಜನರು ನಾನಾ ವಿಭಾಗಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಈ ಬಗ್ಗೆ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದೇವೆ. ಗರಿಷ್ಠ ಒಂದು ವಾರದೊಳಗೆ ಸಂಪರ್ಕ ಅರ್ಜಿ ವಿಲೇವಾರಿಯಾಗುವಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ವಲಯ ಮಟ್ಟದಲ್ಲಿ, ಅಧೀಕ್ಷಕ ಕಚೇರಿ ಹಾಗೂ ಕಮಿಷನರ್ ಕಚೇರಿ ಮಟ್ಟದಲ್ಲಿ ಲಾಗಿನ್‌ಗಳನ್ನು ಹೊಂದಲು ವ್ಯವಸ್ಥೆ ರೂಪಿಸಲಾಗುತ್ತಿದೆ. ಒಂದು ವಾರದಲ್ಲಿ ಪೂರ್ಣಗೊಳ್ಳಲಿದ್ದು, ಅಷ್ಟರಲ್ಲಿ ಪ್ರಸ್ತಾವನೆಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಆಯುಕ್ತ ಉಳ್ಳಾಗಡ್ಡಿ ತಿಳಿಸಿದರು.
ಅಕ್ರಮ ನಳಗಳಿಗೆ ಆರ್ ಆರ್ ನಂಬರ್ಪಾಲಿಕೆ ವ್ಯಾಪ್ತಿಯಲ್ಲಿ 32 ಸಾವಿರ ಅನಧಿಕೃತ ನಳ ಸಂಪರ್ಕಗಳಿದ್ದವು. ಅದರಲ್ಲಿ 4-5 ಸಾವಿರ ಸಂಪರ್ಕಗಳಿಗೆ ಆರ್‌ಆರ್ ನಂಬರ್ ಕೊಡಲಾಗಿದೆ. ಉಳಿದವುಗಳಿಗೆ ಹಂತ ಹಂತವಾಗಿ ನಂಬರ್ ನೋಂದಣಿ ಮಾಡಿಕೊಂಡು ರೆಗ್ಯುಲರ್ ಮಾಡುವುದಾಗಿ ಆಯುಕ್ತರು ಹೇಳಿದರು.
300 ಕಿಮೀ ಮತ್ತೆ ಹೊಸ ಪೈಪ್ಲೈನ್ಒತ್ತಡ ಸಹಿತ ನಿರಂತರ ನೀರು ಪೂರೈಸುವಲ್ಲಿ ಎಲ್‌ಆ್ಯಂಡ್ ಟಿ ಸಂಸ್ಥೆಯು ವಿಫಲವಾಗಿದೆ. ಹಾಗಾಗಿ 300 ಕಿಮೀ ಯಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ಗಳನ್ನು ತೆಗೆದು ಹೊಸದಾಗಿ ಮತ್ತು ಗುಣಮಟ್ಟದ ಪೈಪ್ ಅಳವಡಿಸಬೇಕೆಂದು ಸೂಚಿಸಲಾಗಿದೆ. 43 ಕೋಟಿ ವೆಚ್ಚದಲ್ಲಿ 300 ಕಿಮೀ ಯಷ್ಟುಪೈಪ್‌ಲೈನ್ ಅಳವಡಿಸಿದ್ದನ್ನು, ವಿಶ್ವಬ್ಯಾಂಕ್, ಕೇಂದ್ರ ಸರಕಾರ ಮಾರ್ಗಸೂಚಿಗಳಂತೆ ಇಲಾಖೆಯಿಂದ ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ. ಇದರಲ್ಲಿ ಗುಣಮಟ್ಟದ ನೀರು ಪೂರೈಕೆಯಾಗುವುದಿಲ್ಲ ಹಾಗೂ ಒತ್ತಡದ ನೀರು ಸರಬರಾಜವಾಗುವುದಿಲ್ಲ ಎಂಬುದು ದೃಢಪಟ್ಟಿದೆ. ಹಾಗಾಗಿ ಹೊಸದಾಗಿ ಅಳವಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಇಲಾಖೆ, ಕೆಯುಐಡಿಎಫ್‌ಸಿ ತಾಂತ್ರಿಕ ಸಮಿತಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ಏಳೆಂಟು ವರ್ಷ ನಿರ್ವಹಣೆ ಮಾಡುತ್ತಿದ್ದು, ಸರಿಪಡಿಸುತ್ತೇವೆ ಎಂದು ಗುತ್ತಿಗೆ ಸಂಸ್ಥೆ ಹೇಳಿಕೊಂಡಿದೆ. ಇದನ್ನು ಸರಕಾರ ಒಪ್ಪಿಕೊಂಡಿಲ್ಲ, ಭವಿಷ್ಯದ ದೃಷ್ಟಿಯಿಂದ ಪೈಪ್‌ಲೈನ್ ಬದಲಾಯಿಸದೇ ದಾರಿ ಇಲ್ಲ ಎಂದು ಉಳ್ಳಾಗಡ್ಡಿ ತಿಳಿಸಿದರು.
ಸಭೆಯಲ್ಲಿ ಉಪಮೇಯರ್ ಸತೀಶ ಹಾನಗಲ್ಲ, ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ಸಭಾನಾಯಕ ಶಿವು ಹಿರೇಮಠ, ದೊರಾಜು ಮಣಿಕುಂಟ್ಲ, ಅಧೀಕ್ಷಕ ಎಂಜಿನಿಯರ್ ಇ.ತಿಮ್ಮಪ್ಪ ಹಾಗೂ ಇತರ ಅಧಿಕಾರಿಗಳು ಇದ್ದರು.₹34 ಕೋಟಿ ದಂಡ
ಕಾಮಗಾರಿ ವಿಳಂಬ ಮತ್ತು ನಿಗದಿತ ವಿನ್ಯಾಸದಂತೆ ಕೆಲಸ ಮಾಡದ ಎಲ್‌ಆ್ಯಂಡ್ ಟಿ ಕಂಪನಿಗೆ ₹34 ಕೋಟಿ ದಂಡ ವಿಧಿಸಿದ್ದು, ಸರಕಾರಕ್ಕೆ ಸಂದಾಯವಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.