ಕನ್ನಡಪ್ರಭ ವಾರ್ತೆ ಔರಾದ್
ಪಟ್ಟಣದ ಬಸವೇಶ್ವರ ವೃತದ ಬಳಿ ಇಪ್ಪತ್ತಕ್ಕೂ ಹೆಚ್ಚಿನ ಸಂಘಟನೆಯ ಮುಖಂಡರು ಹಾಗೂ ಮಹಿಳೆಯರು, ಮಕ್ಕಳು ಖಾಲಿ ಕೊಡವನ್ನು ಹಿಡಿದು ಕೊಂಡು ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಕಲ್ಪಿಸುವವರೆಗೆ ಹೋರಾಟ ನಿರಂತರವಾಗಿ ನಡೆಸಲಾಗುತ್ತದೆ ಎಂದು ಪಟ್ಟು ಹಿಡಿದು ಹೋರಾಟಗಾರರು ಕುಳಿತುಕೊಂಡಿದ್ದರು.
ಸಮಿತಿ ತಾಲೂಕು ಅಧ್ಯಕ್ಷ ಡಾ: ಧನರಾಜ ರಾಗಾ ಮಾತನಾಡಿ, ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತಿತ್ತು ಆದರೆ ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಚಳಿಗಾಲದಲ್ಲಿಯೇ ನೀರಿನ ಸಮಸ್ಯೆ ತಾಲೂಕು ಕೇಂದ್ರ ಸ್ಥಾನದಲ್ಲಿ ತಾಂಡವಾಡುತ್ತಿದೆ. ಈ ಬಗ್ಗೆ ತಹಸೀಲ್ದಾರ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೂ ಮನವಿ ಸಲ್ಲಿಸಿದರೂ ಕಳೆದ ಎರಡು ತಿಂಗಳಿಂದ ಯಾವುದೇ ರೀತಿಯ ಪ್ರಯೋಜನೆವಾಗದ ಹಿನ್ನೆಲೆಯಲ್ಲಿ ಇಂದು ರಸ್ತೆಗಿಳಿದು ನೀರಿಗಾಗಿ ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದರು.ತಾಲೂಕು ಕೇಂದ್ರಸ್ಥಾನವಾಗಿರುವ ಸ್ಥಳದಲ್ಲಿಯೇ ಎರಡು ತಿಂಗಳಿಂದ ಕುಡಿಯುವ ನೀರು ಪೂರೈಸಲು ವಿಫಲವಾದ ತಹಶೀಲ್ದಾರ ಮಹೇಶ ಪಾಟೀಲ್ ಅವರನ್ನು ಕೂಡಲೇ ಔರಾದ್‌ನಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲು ಮುಂದಾಗ ಬೇಕು. ಶಾಶ್ವತ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕೆಂದು ರಾಗಾ ತಾಕೀತು ಮಾಡಿದರು.
ಮಾಜಿ ಶಾಸಕ ಗುಂಡಪ್ಪ ವಕೀಲ್ ಮಾತನಾಡಿ, 2008ರಲ್ಲಿ ನಾನು ಶಾಸಕನಾಗಿ ಮಾಡಿದ ಅಭಿವೃದ್ಧಿಯ ಕಾಮಗಾರಿಗಳ ನಂತರ ತಾಲೂಕಿನಲ್ಲಿ ಅಭಿವೃದ್ಧಿಯ ಕಾಮಗಾರಿಗಳು ನಡೆಯುತ್ತಿಲ್ಲ ಎಂದರು. ಬಸವರಾಜ ಶಟಕಾರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಕಂಬಾರ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ಎಸಿ, ತಹಸೀಲ್ದಾರ್ ಭೇಟಿ: ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಸಹಾಯಕ ಆಯುಕ್ತ ಅಭಿನವ ಜೈನ್ ಹಾಗೂ ತಹಶೀಲ್ದಾರ ಮಹೇಶ ಪಾಟೀಲ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ವಾರದಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುತ್ತೇವೆ ಮತ್ತು ಟ್ಯಾಂಕರ್ ಮೂಲಕ ಪ್ರತಿಯೊಂದು ವಾರ್ಡ್‌ಗೂ ನೀರು ಸರಬರಾಜು ಮಾಡುತ್ತೇವೆಂದು ಲಿಖಿತ ರೂಪದಲ್ಲಿ ಅಧಿಕಾರಿಗಳು ಪತ್ರ ಬರೆದುಕೊಟ್ಟ ನಂತರವೇ ಹೋರಾಟಗಾರರು ಹೋರಾಟ ಹಿಂದಕ್ಕೆ ಪಡೆದರು. ಇನ್ನು ಮೋಟರ್ ಕಳವು ಆಗಿರುವ ಬಗ್ಗೆ ಪ್ರಕರಣ ದಾಖಲಿಸುತ್ತೆವೆಂದು ಭರವಸೆ ನೀಡಿದರು.