ಕಿ.ಮೀ.ದೂರ ಹೋಗಿ ನೀರು ತರುವ ಸ್ಥಿತಿ
ಕನ್ನಡಪ್ರಭ ವಾರ್ತೆ ಹುಣಸಗಿತಾಲೂಕಿನ ಕನಗಂಡನಹಳ್ಳಿ ಮತ್ತು ತಾಂಡಾದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಮದಲ್ಲಿ ಸಮರ್ಪಕ ನೀರು ಸಿಗದ ಕಾರಣ ಕಿಲೋ ಮೀಟರ್ ದೂರ ಸಾಗಿ ನೀರು ತಂದು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕನಗಂಡನಹಳ್ಳಿ ಮತ್ತು ತಾಂಡಾದಲ್ಲಿ ಸುಮಾರು 1500ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಇಲ್ಲಿರುವ ಜನರಿಗೆ ಪ್ರತಿ ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಪ್ರಯೋಜನಕ್ಕೆ ಬಾರದೇ ನಿಷ್ಕ್ರಿಯಗೊಂಡಿದೆ. ಗ್ರಾಮದ ಹಿಂದೆ ಬಾವಿ ಇದ್ದು, ಈ ಬಾವಿಯಿಂದ ಕೆಲವು ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಅದು ಕೂಡ ಎಲ್ಲೆಂದರಲ್ಲಿ ಪೈಪ್ ಹೊಡೆದು ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 500 ಮೀಟರ್ ಅಂತರದಲ್ಲಿ ಎರಡು ಕೈ ಪಂಪ್‌ಗಳಿವೆ. ಕನಗಂಡನಹಳ್ಳಿ ಮತ್ತು ತಾಂಡಾದಲ್ಲಿನ ಈ ಎರಡು ಕೈಪಂಪ್‌ಗಳನ್ನು ನೆಚ್ಚಿಕೊಂಡು ಸೈಕಲ್ ಹಾಗೂ ನೀರಿನ ಬಂಡಿಗಳಲ್ಲಿ ನೀರು ತಂದು ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಈ ಎರಡು ಕೈಪಂಪ್ ಗಳಲ್ಲಿಯೂ ಕೂಡ ಸಮರ್ಪಕ ನೀರು ಸಿಗುತ್ತಿಲ್ಲ. ಗಂಟೆಗಟ್ಟಲೆ ಕಾಯ್ದು ನೀರು ತೆಗೆದುಕೊಂಡು ಹೋಗಬೇಕಾಗಿದೆ.
ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಎರಡು ಕೈಪಂಪ್‌ಗಳು ಇದ್ದು, ಇದರಲ್ಲಿ ಒಂದು ಕೈಪಂಪ್ ನೀರು ಸಾಲದೆ ಅರ್ಧಕ್ಕೇ ನಿಲ್ಲುತ್ತಿದೆ. ಇನ್ನು ಒಂದು ಕೈ ಪಂಪ್ ಅಧಿಕಾರಿಗಳ ನಿಷ್ಕಾಳಜಿಯಿಂದ ನಿಷ್ಕ್ರಿಯಗೊಂಡಿದೆ. ಇದನ್ನು ಸರಿಪಡಿಸಿ ಎಂದು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲವೆಂದು ಗ್ರಾಮದ ಯುವಕ ನಿಂಗಣ್ಣ ಗಡದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.