ಕೋಟುಮಚಗಿಯಲ್ಲಿ ಕುಡಿವ ನೀರಿಗೆ ಸಮಸ್ಯೆ

KannadaprabhaNewsNetwork | Published : May 29, 2024 12:46 AM

ಸಾರಾಂಶ

ಗ್ರಾಮದಲ್ಲಿ ಕುಡಿವ ನೀರಿಗೆ ಮಾತ್ರವಲ್ಲದೇ ನಿತ್ಯವೂ ಸಾರ್ವಜನಿಕರು ಬಳಕೆ ಮಾಡುವ ನೀರಿನ ಪರಿಸ್ಥಿತಿ ಕೂಡಾ ತೀರಾ ಹದಗೆಟ್ಟಿದ್ದು, ಸದ್ಯ 18 ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ

ಶಿವಕುಮಾರ ಕುಷ್ಟಗಿ ಗದಗ

ತಾಲೂಕಿನ ಕೋಟುಮಚಗಿಯಲ್ಲಿ ಕುಡಿವ ನೀರಿನ ಗಂಭೀರ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ನಿತ್ಯವೂ ನಾಲ್ಕೈದು ಕಿಮೀ ಕ್ರಮಿಸಿ ಪಕ್ಕದ ನಾರಾಯಣಪುರ, ನರೇಗಲ್ಲ, ಅಬ್ಬಿಗೇರಿ ಗ್ರಾಮಗಳಿಂದ ಕುಡಿಯುವ ನೀರು ತರುವ ಪರಿಸ್ಥಿತಿ ಇದೆ.

10 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಕೋಟುಮಚಗಿ ತಾಲೂಕಿನಲ್ಲಿ ದೊಡ್ಡ ಗ್ರಾಮ. ಆದರೆ ಈ ಗ್ರಾಮದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿದ್ದು, ಸಮಸ್ಯೆ ಕೂಡಾ ದೊಡ್ಡದಾಗಿಯೇ ಬೆಳೆದು ನಿಂತಿದ್ದು ಜನರು ತತ್ತರಿಸಿ ಹೋಗಿದ್ದಾರೆ.

3 ಆರ್ ಓ ಪ್ಲ್ಯಾಂಟ್: ಕೋಟುಮಚಗಿ ಗ್ರಾಮದಲ್ಲಿ ಪ್ರಸ್ತುತ 3 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಮೂರರಲ್ಲಿ ಎರಡು ಸ್ಥಗಿತಗೊಂಡು ಹಲವಾರು ತಿಂಗಳು ಕಳೆದಿವೆ, ಇನ್ನುಳಿದ ಒಂದನ್ನು ಕಳೆದ ಮೂರು ದಿನಗಳ ಹಿಂದಷ್ಟೇ ರಿಪೇರಿ ಮಾಡಿಸಿದ್ದು, ಅದೊಂದೇ ಘಟಕದಿಂದ ಇಡೀ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ಆಗಾಗ್ಗೆ ಸ್ಥಗಿತಗೊಳ್ಳುತ್ತಿದ್ದು, ಅನಿವಾರ್ಯವಾಗಿ ಗ್ರಾಮಸ್ಥರು ಮತ್ತೆ ಅಕ್ಕಪಕ್ಕದ ಊರಿಗೆ ತೆರಳಿ ಶುದ್ಧ ಕುಡಿವ ನೀರು ತರುವಂತಾಗಿದೆ.

ನೀರು ಕೊಡಲು ಆಗುತ್ತಿಲ್ಲ: ಗ್ರಾಮದಲ್ಲಿ ಕುಡಿವ ನೀರಿಗೆ ಮಾತ್ರವಲ್ಲದೇ ನಿತ್ಯವೂ ಸಾರ್ವಜನಿಕರು ಬಳಕೆ ಮಾಡುವ ನೀರಿನ ಪರಿಸ್ಥಿತಿ ಕೂಡಾ ತೀರಾ ಹದಗೆಟ್ಟಿದ್ದು, ಸದ್ಯ 18 ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ನೀರು ತರುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಈ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ನಾಲ್ಕಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, ಎಲ್ಲದರಲ್ಲಿ ಹೇರಳವಾದ ನೀರು ಲಭ್ಯವಿದೆ. ಆದರೆ ಅಧಿಕಾರಿಗಳು ಮತ್ತು ಗ್ರಾಪಂ ಸಮನ್ವಯತೆಯ ಕೊರತೆಯಿಂದ ಸೂಕ್ತ ರೀತಿಯಲ್ಲಿ ನೀರು ಸಂಗ್ರಹಿಸಿ ವಿತರಣೆ ಮಾಡಲು ಸಾಧ್ಯವಾಗದೇ ಇರುವುದು ಕೂಡಾ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ನೇರ ಪರಿಣಾಮ ಏನೂ ಅರಿಯದ ಸಾರ್ವಜನಿಕರು ಎದುರಿಸುತ್ತಿದ್ದಾರೆ.

ಪೂರೈಸಿದ ನೀರನ್ನೇ ಕುಡಿಯಬೇಕಂತೆ: ಕೋಟುಮಚಗಿ ಗ್ರಾಮದಲ್ಲಿ ಆರ್ ಓ ಪ್ಲ್ಯಾಂಟ್ ಸ್ಥಗಿತವಾಗಿರುವ ಬಗ್ಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯೋರ್ವರರನ್ನು ಸಂಪರ್ಕಿಸಿದಾಗ, ಸುಪ್ರೀಂ ಕೋರ್ಟನ ಹೊಸ ನಿಯಮ ಬಂದಿದೆ, ಆರ್ ಓ ಪ್ಲ್ಯಾಂಟ್ ನೀರನ್ನೇ ಕೊಡಬೇಕು ಎನ್ನುವುದು ಕಡ್ಡಾಯವಲ್ಲ, ನಾವು ಈಗ ಪೂರೈಕೆ ಮಾಡುತ್ತಿರುವ ಕೊಳವೆಬಾವಿ ನೀರು ಕೂಡಾ ಕುಡಿಯಲು ಯೋಗ್ಯವಾಗಿದೆ. ಅದನ್ನೇ ಜನರು ಕುಡಿಯಬೇಕು. ಜನರಿಗೆ ನೀರು ಪೂರೈಕೆ ಮಾಡುವ ಮೊದಲೇ ಅದು ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಿಯೇ ನಾವು ಕೊಡುತ್ತೇವೆ. ಕೋಟುಮಚಗಿ ಗ್ರಾಮದ ಪ್ರತಿಯೊಂದು ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಯೇ ಇವೆ. ಅದನ್ನು ಬಿಟ್ಟು ಬೇರೆ ಗ್ರಾಮದಲ್ಲಿನ ಆರ್ ಓ ಪ್ಲ್ಯಾಂಟ್ ಹೋಗಿ ನೀರು ತಂದರೆ ನಾವೇನು ಮಾಡಲು ಆಗುತ್ತದೆ ಎನ್ನುವ ವಿಚಿತ್ರ ಉತ್ತರ ನೀಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.

ಜನರೇಕೆ ಕುಡಿಯುತ್ತಿಲ್ಲ: ಕೋಟುಮಚಗಿ ಗ್ರಾಮ ಸೇರಿದಂತೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸದ್ಯ ಪೂರೈಕೆ ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪರೀಕ್ಷಾ ವರದಿಗಳು ಬಂದಿವೆ. ಆ ವರದಿಗಳನ್ನು ನಿಮಗೆ ಕೊಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಆಯಾ ಗ್ರಾಮಗಳಲ್ಲಿನ ಜನರು ಮಾತ್ರ ಕೊಳವೆಬಾವಿಗಳಿಂದ ಪೂರೈಕೆ ಮಾಡುವ ನೀರು ಗಡುಸಾಗಿದೆ, ಆ ನೀರನ್ನು ನಾವಲ್ಲ, ಜಾನುವಾರು ಸಹ ಕುಡಿಯುತ್ತಿಲ್ಲ ಎನ್ನುತ್ತಾರೆ.

ಹಿರಿಯ ಅಧಿಕಾರಿಗಳು ನೀರು ತಪಾಸಣೆ ಮಾಡಿಸಿದ್ದು ಕುಡಿಯಲು ಯೋಗ್ಯವಾಗಿದೆ ಎನ್ನುತ್ತಾರೆ. ಆದರೆ ಗ್ರಾಮಸ್ಥರು ಅದು ಯೋಗ್ಯವಾಗಿಲ್ಲ ಎನ್ನುತ್ತಾರೆ. ಇವರಿಬ್ಬರಲ್ಲಿ ಯಾರು ಸರಿ ಎನ್ನುವ ಬಗ್ಗೆಯೇ ಜಿಜ್ಞಾಸೆ ಉಂಟಾಗಿದೆ

ಮನೆಯಲ್ಲಿ ದ್ವಿಚಕ್ರ ವಾಹನ ಇದ್ದವರು ಅಕ್ಕಪಕ್ಕದ ಊರಿಗೆ ಹೋಗಿ ಕುಡಿವ ನೀರು ತರುತ್ತಾರೆ, ವಾಹನ ಇಲ್ಲದವರು, ಮನೆಯಲ್ಲಿ ವಯೋವೃದ್ಧರು ಇರುವವರು ಅನಿವಾರ್ಯವಾಗಿ ಎರಡು ಮೂರು ದಿನವಾದರೂ ಸರಿ ಸರದಿ ಸಾಲಿನಲ್ಲಿ ನಿಂತು ಕುಡಿವ ನೀರು ಪಡೆಯುವಂತಾಗಿದೆ.

ಗ್ರಾಮಕ್ಕೆ ಬೇಕಾಗುವಷ್ಟು ನೀರು ಸಂಗ್ರಹವಾಗುತ್ತಿದೆ, ಅದನ್ನು ಪೂರೈಕೆ ಕೂಡಾ ಮಾಡಲಾಗುತ್ತಿದೆ.ಆರ್ ಓ ಪ್ಲ್ಯಾಂಟ್ ಗಳ ಪ್ರಾರಂಭವಿರದೇ ಇರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ರಾಘವೇಂದ್ರ. ಡಿ, ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ನೀರಿನ‌ ಸಮಸ್ಯೆ ಇತ್ತು ಅದನ್ನು ಸರಿಪಡಿಸಲಾಗಿದೆ. 3ಆರ್ ಓ ಪ್ಲ್ಯಾಂಟ್ ಗಳಲ್ಲಿ ಒಂದನ್ನು ಸರಿಪಡಿಸಲಾಗಿದೆ. ಇನ್ನೆರಡು ಸರಿಪಡಿಸುವುದು ಹಾಗೂ ನೀರು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಚರ್ಚಿಸಲು ತುರ್ತು ಸಭೆ ಕರೆಯಲಾಗಿದೆ ಎಂದು ಕೋಟುಮಚಗಿ ಪಿಡಿಓ ಸಂತೋಷ ಎಂ.ಎಚ್ ಹೇಳಿದರು.

Share this article