ಬೇಸಿಗೆ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ದೂರ!

KannadaprabhaNewsNetwork | Published : May 5, 2025 12:49 AM

ಸಾರಾಂಶ

ಈ ವರ್ಷ ಮಾರ್ಚ್‌ ಏಪ್ರಿಲ್‌ ಮೇ ಆರಂಭದಲ್ಲೂ ಕೂಡ ಜಿಲ್ಲೆಯ ಅಲ್ಲಲ್ಲಿ ಉತ್ತಮ ಬೇಸಗೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೇಸಗೆಯಲ್ಲಿ ಸತತವಾಗಿ ಮಳೆಯಾದ ಪರಿಣಾಮ ಕುಡಿಯುವ ನೀರಿನ ಸಮಸ್ಯೆ, ಕಾಡ್ಗಿಚ್ಚು ಭೀತಿ, ಮೇವಿನ ಕೊರತೆ ಸೇರಿದಂತೆ ಸಾಕಷ್ಟು ಬೇಸಗೆಯಲ್ಲಿ ಸೃಷ್ಟಿಯಾಗುವ ಸಮಸ್ಯೆಗಳು ಈ ಬಾರಿ ದೂರವಾಗಿದೆ.

ಕಾವೇರಿ ತವರು ಕೊಡಗು ಜಿಲ್ಲೆಯಲ್ಲೂ ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಆದರೆ ಈ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ಆರಂಭದಲ್ಲೂ ಕೂಡ ಜಿಲ್ಲೆಯ ಅಲ್ಲಲ್ಲಿ ಉತ್ತಮ ಬೇಸಗೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಇನ್ನೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಗಾಲ ಕೂಡ ಆರಂಭವಾಗುವುದರಿಂದ ನೀರಿನ ಸಮಸ್ಯೆ ತಲೆದೋರುವ ಪರಿಸ್ಥಿತಿ ತೀರಾ ಕಡಿಮೆಯಾಗಿದೆ.

ಮಡಿಕೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯಲ್ಲೂ ಕೂಡ ಸಾಕಷ್ಟು ನೀರು ಇರುವದರಿಂದ ಈ ಬಾರಿ ನಗರದಲ್ಲಿ ನೀರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಪ್ರತಿ ವರ್ಷ ಕೂಡ ಬೇಸಗೆ ಆರಂಭವಾದರೆ ನಗರದ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಎದುರಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು.

ಕಾವೇರಿಯಲ್ಲಿದೆ ನೀರು: ಕಳೆದ ವರ್ಷ ಕಾವೇರಿ ನದಿ ನೀರು ಡಿಸೆಂಬರ್‌ನಲ್ಲೇ ಬತ್ತಿ ಹೋಗಿ ಬಂಡೆಕಲ್ಲುಗಳ ದರ್ಶನವಾಗಿತ್ತು. ಇದರಿಂದ ಜಿಲ್ಲಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲದೇ ಕಾವೇರಿ ನದಿಯಲ್ಲಿ ಮಾತ್ರ ಕಾಣಸಿಗುವ ಮಹಶೀರ್ ಮೀನಿಗೂ ಆಪತ್ತು ಉಂಟಾಗಿತ್ತು. ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಗುಡ್ಡೆಹೊಸೂರು, ಮಾದಪಟ್ಟಣ, ಬಸವನಹಳ್ಳಿ ಸೇರಿದಂತೆ ವಿವಿಧ ಕಡೆಯ ಜನರು ಕಾವೇರಿ ನದಿ ನೀರನ್ನು ಅವಲಂಭಿಸಿದ್ದಾರೆ. ಈ ಬಾರಿ ನದಿಯಲ್ಲಿ ತಕ್ಕ ಮಟ್ಟಿಗೆ ನೀರಿರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಉಂಟಾಗಿಲ್ಲ.

ಮೇವಿನ ಕೊರತೆಯೂ ಕ್ಷೀಣ: ಬೇಸಗೆಯಲ್ಲಿ ಸಾಕಷ್ಟು ಮೇವಿನ ಕೊರತೆಯನ್ನು ಜಿಲ್ಲೆಯ ಹೈನುಗಾರರು ಎದುರಿಸುತ್ತಿದ್ದರು. ತಮ್ಮ ಜಾನುವಾರುಗಳಿಗೆ ಒಣ ಹುಲ್ಲನ್ನು ನೀಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಈಗ ಹೊಲ, ಗದ್ದೆಗಳು ಕೂಡ ಹಸಿರಾಗಿದ್ದು, ಜಾನುವಾರುಗಳಿಗೂ ಕೂಡ ಸಾಕಷ್ಟು ಮೇವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಾಡಿನ ಪ್ರದೇಶ ಒಣಗಿ ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯುಂಟಾಗಿತ್ತು. ಆದರೆ ಈ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಹಾಗೂ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ.

ಹಾರಂಗಿಯಲ್ಲೂ ನೀರು ಸಮೃದ್ಧ: ಕೊಡಗಿನ ಪ್ರಮುಖ ಜಲಾಶಯ ಹಾರಂಗಿಯಲ್ಲೂ ಕೂಡ ನೀರು ಸಾಕಷ್ಟಿದೆ. ಮೇ 4ರಂದು 2831.96 ಅಡಿಯಷ್ಟು ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2824.15 ಅಡಿಗಳಷ್ಟು ಮಾತ್ರ ನೀರಿತ್ತು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿರುವುದರಿಂದ ಹಾರಂಗಿಯಲ್ಲಿ 168 ಕ್ಯುಸೆಕ್ ಒಳಹರಿವು ಕೂಡ ಇದ್ದು, ನದಿಗೆ 100 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಚಿಕ್ಲಿಹೊಳೆ ಜಲಾಶಯದಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಬೇಸಗೆಯಲ್ಲಿ ಅಂತರ್ ಜಲಮಟ್ಟ ಕುಸಿದು ಬೋರ್‌ವೆಲ್‌ಗಳಲ್ಲಿ ಕೂಡ ನೀರು ದೊರಕದ ಪರಿಸ್ಥಿತಿ ಉಂಟಾಗುತ್ತಿತ್ತು. ಈ ಬಾರಿ ಮಳೆಯಿಂದ ಅಂತರ್ ಜಲಮಟ್ಟ ಇಳಿಮುಖವಾಗದ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ.ಅರಣ್ಯ ಪ್ರದೇಶವೂ ಹಸಿರು!

ಸತತ ಮಳೆಯಿಂದಾಗಿ ಜಿಲ್ಲೆಯ ಅರಣ್ಯ ಪ್ರದೇಶವೂ ಕೂಡ ಹಸಿರಾಗಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡ್ಗಿಚ್ಚು ಭೀತಿ ಎದುರಾಗುತ್ತದೆ. ಅಲ್ಲದೆ ಪ್ರತಿ ವರ್ಷ ಕೊಡಗಿನ ಕೆಲವು ಅರಣ್ಯ ಪ್ರದೇಶಗಳು ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಕಾಡ್ಗಿಚ್ಚು ಉಂಟಾಗಿತ್ತು. ಈ ಬಾರಿ ಅರಣ್ಯ ಪ್ರದೇಶ ಹಸಿರಿನಿಂದ ಕೂಡಿದ್ದು, ಶೀತಾಂಶವಿದೆ. ಇದರಿಂದ ಕಾಡ್ಗಿಚ್ಚು ಸಂಭವಿಸುವ ಭೀತಿ ಈ ವರ್ಷ ದೂರವಾಗಿದೆ.ಬೇಸಿಗೆಯಲ್ಲಿ ಕಾವೇರಿ ನೀರು ಬತ್ತುವ ಪರಿಣಾಮ ಮಾದಪಟ್ಟಣ ಹಾಗೂ ಬಸವನಹಳ್ಳಿಯಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಾಕಷ್ಟು ನೀರಿನ ಕೊರತೆಯುಂಟಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿಯಲ್ಲಿ ನೀರು ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

। ಎಂ.ಆರ್. ಸುಮೇಶ್, ಪಿಡಿಒ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ

ಕಳೆದ ವರ್ಷ ಇದೇ ಅವಧಿಯಲ್ಲಿ ಕಾಡಿನ ಪ್ರದೇಶ ಒಣಗಿ ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯುಂಟಾಗಿತ್ತು. ಆದರೆ ಈ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಹಾಗೂ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಅಲ್ಲದೆ ಕಾಡ್ಗಿಚ್ಚು ಆತಂಕವೂ ದೂರವಾಗಿದೆ. ಮಳೆಯ ಹಿನ್ನೆಲೆಯಲ್ಲಿ ನಾಡಿಗೆ ಬರುವ ಕಾಡು ಪ್ರಾಣಿಗಳ ಪ್ರಮಾಣ ಕೂಡ ಕಡಿಮೆಯಾಗಿದೆ.

। ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ ವಿಭಾಗ

Share this article