ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕುರಿತು ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು ಮಾತನಾಡಿದರು.
ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುಡಿಯುವ ನೀರಿಗೆ ಯಾವುದೇ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರವಹಿಸಿ. ನೀರಿನ ಸರಬರಾಜು ವ್ಯವಸ್ಥೆಯಲ್ಲಿರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಸ್ವಚ್ಛಗೊಳಿಸಿ, ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಲು ಕ್ರಮ ವಹಿಸಿ ಎಂದರು.ನೀರಿನ ಮೂಲಗಳಾದ ಕೊಳವೆ ಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ಅಥವಾ ಚರಂಡಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕೈಗೊಂಡು, ನೀರಿನ ಮೂಲದ ಸುತ್ತ ಕಾಂಕ್ರೀಟ್ ಕಟ್ಟೆ ಕಟ್ಟಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಗ್ರಾಮಗಳಲ್ಲಿ ಸ್ವಚ್ಛತೆ, ಚರಂಡಿಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಹೊಟೇಲ್, ರಸ್ತೆಯ ಬದಿಯ ಫಾಸ್ಟ್ ಫುಡ್ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು. ಜಿಲ್ಲೆಯಲ್ಲಿ ಡೆಂಘೀ, ಚಿಕೂನ್ ಗುನ್ಯಾ ವ್ಯಾಪಿಸದಂತೆ ತೀವ್ರ ನಿಗಾ ವಹಿಸಲು ಅಧಿಕಾರಿಗಳು ಮುಂದಾಗಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದರು.
ನೀರಿನ ವ್ಯವಸ್ಥೆಯಡಿ ಬರುವ ಎಲ್ಲಾ ಪೈಪ್ಲೈನ್ ಗಳನ್ನು ಪ್ರತಿದಿನವೂ ಕಣ್ಣಗಾವಲು ನಡೆಸಿ. ಪೈಪ್ ಲೈನ್ ಹಾನಿಯಾಗಿದ್ದರೆ ಕಲುಷಿತ ನೀರು ಕುಡಿಯುವ ನೀರಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಗಮನವಹಿಸಿ ದುರಸ್ಥಿ ಕಾರ್ಯ ನಡೆಯಬೇಕು. ಒಂದು ವೇಳೆ ನಗರ ಪ್ರದೇಶಗಳಲ್ಲಿ ಕರುಳು ಬೇನೆ, ವಾಂತಿ, ಭೇಧಿ ಪ್ರಕರಣಗಳು ಕಂಡು ಬಂದರೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಆ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ವಹಿಸಬೇಕು. ತಾಲೂಕಿನ ಆಸ್ಪತ್ರೆ ಹಾಗೂ ಕ್ಲಿನಿಕ್ ಗಳಲ್ಲಿ ಕರುಳು ಬೇನೆ ಪ್ರಕರಣಗಳು ಬಂದರೆ ಮಾಹಿತಿ ನೀಡುವಂತೆ ಹಾಗೂ ಆ ಸಂಬಂಧ ಅಗತ್ಯ ಕ್ರಮ ವಹಿಸಲು ಮುಂದಾಗಬೇಕು ಎಂದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹುಣಸೂರು ಉಪ ವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಕುಡಿಯುವ ನೀರು ಸರಬರಾಜಿನ ಕೊಳವೆ ಮಾರ್ಗಗಳು ಒಡೆದು ಹೋದಲ್ಲಿ ತಕ್ಷಣ ದುರಸ್ಥಿಪಡಿಸಲು ಕ್ರಮ ವಹಿಸಬೇಕು. ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಪೈಪ್ ಒಡೆದು ಹೋಗಿದ್ದಲ್ಲಿ, ಹೊರಗಿನ ಇತರೆ ವಸ್ತುಗಳು, ಕೊಳಚೆ ನೀರು ಕುಡಿಯುವ ನೀರಿನ ಸರಬರಾಜಿನ ಪೈಪ್ ಲೈನ್ ಒಳಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಯಡಿ ಕುಡಿಯುವ ನೀರನ್ನು ಸರಬರಾಜು ಮಾಡಲು ನಿರ್ಮಿಸಿರುವ ಓವರ್ಹೆಡ್ ಟ್ಯಾಂಕ್ ಗಳ ನೀರಿನ ಗುಣಮಟ್ಟದ ಪರೀಕ್ಷೆ ಮಾಡಬೇಕು.- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿಸ್ವಚ್ಛ ನೀರು, ಸ್ವಚ್ಛ ವಾತಾವರಣ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ವೆಟ್ ವೆಸ್ಟ್ ಹಾಕದಂತೆ ಗಮನಹರಿಸಿ, ಮುಂದೆ ಮಳೆಗಾಲ ಆರಂಭವಾಗುವುದರಿಂದ ಚರಂಡಿ ಸ್ವಚ್ಛಗೊಳಿಸಿ ಹಾಗೂ ಗ್ರಾಮಗಳಲ್ಲಿ ಶುಚಿತ್ವದ ಅರಿವು ಮೂಡಿಸಬೇಕು.
- ಕೆ.ಎಂ. ಗಾಯತ್ರಿ, ಜಿಪಂ ಸಿಇಒ