ಮುಕ್ತಾಯ ಹಂತದಲ್ಲಿ ಹನಿ ನೀರಾವರಿ ಯೋಜನೆ: ದೊಡ್ಡಯ್ಯ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಈಗಾಗಲೇ ಹನಿ ನೀರಾವರಿ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಸಾಮೂಹಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮ ಹಾಗೂ ಜೈನ್ ಇಗ್ರೀಗೇಷನ್ ಕಂಪನಿ ಮೂಲಕ ರೈತರಿಗೆ ಅರಿವು ಮೂಡಿಸು ಕಾರ್ಯಕ್ರಮಗಳು ನಡೆಯುತ್ತಿದೆ, ಕೃಷಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರೈತರೇ ಆಗಿರುತ್ತಾರೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಪೂರಿಗಾಲಿ ಹನಿ ನೀರಾವರಿ ಯೋಜನೆಯಡಿ ನಡೆಯಲಿರುವ ಸಮೂಹಿಕ ಕೃಷಿ ಪದ್ಧತಿಯೂ ರೈತರೇ ಕಟ್ಟಿಕೊಂಡಿರುವ ಸಹಕಾರ ಸಂಘದ ಮೂಲಕ ನಿರ್ವಹಣೆ ನಡೆಯುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಮಾಜಿ ಶಾಸಕ ಡಾ.ಕೆ. ಅನ್ನದಾನಿ ರೈತರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹನಿ ನೀರಾವರಿ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಸಾಮೂಹಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮ ಹಾಗೂ ಜೈನ್ ಇಗ್ರೀಗೇಷನ್ ಕಂಪನಿ ಮೂಲಕ ರೈತರಿಗೆ ಅರಿವು ಮೂಡಿಸು ಕಾರ್ಯಕ್ರಮಗಳು ನಡೆಯುತ್ತಿದೆ, ಕೃಷಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರೈತರೇ ಆಗಿರುತ್ತಾರೆ ಎನ್ನುವುದನ್ನು ಮಾಜಿ ಶಾಸಕರು ಮೊದಲು ಅರ್ಥ ಮಾಡಿಕೊಳ್ಳಬೇಕು, ತಾಲೂಕಿನ ಮಹತ್ವಾಕಾಂಕ್ಷೆ ಯೋಜನೆಗೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.

ಕರ್ನಾಟಕ ಪೊಲೀಸ್ ಎಂದರೇ ರಾಜ್ಯದಲ್ಲಿಯೇ ತನ್ನದೇ ಆದ ಗೌರವವಿದೆ, ಆದರೆ ಎರಡು ಬಾರಿ ಶಾಸಕ ಸ್ಥಾನದ ಅಧಿಕಾರ ಪಡೆದಿರುವ ನೀವು ಪೊಲೀಸ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ, ಕಾರ್ಯಾಂಗದಲ್ಲಿರುವ ಅಧಿಕಾರಿಗಳು ಶಾಸಕಾಂಗದ ಸಲಹೆಗಳನ್ನು ಪಡೆಯುವುದು ಸಹಜ. ಅದರಂತೆ ಮನೆಗೆ ಹೋಗಿ ಶಾಸಕರ ಬಳಿ ಸಲಹೆ ಪಡೆಯುವ ಸಂದರ್ಭದಲ್ಲಿ ಶಾಸಕರ ಮಗನಿಗೆ ಶುಭಾಶಯ ಕೋರಿದ್ದಾರೆ. ಇದರಲ್ಲಿ ತಪ್ಪೇನಿದೆ, ನೀವು ಕೂಡ ಪ್ರವಾಸಿ ಮಂದಿರಕ್ಕೆ ಅಧಿಕಾರಿಗಳನ್ನು ಕರೆಸಿಕೊಳ್ಳುತ್ತಿರುವುದನ್ನು ಜ್ಞಾಪಿಸಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಮಾಜಿ ಶಾಸಕರು ಸುದ್ದಿಗೋಷ್ಠಿ ಮಾಡುವ ಸಂದರ್ಭದಲ್ಲಿ ಪಕ್ಕದಲ್ಲಿಯೇ ಕುಳಿತಿರುವ ವ್ಯಕ್ತಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಶುಭಾಶಯ ಕೋರುವ ಸಣ್ಣ ವಿಷಯವನ್ನು ಎರಡು ಬಾರಿ ಶಾಸಕರಾಗಿದ್ದವರು ಮಾತನಾಡುವುದು ಅವರ ಘನತೆಗೆ ಸರಿ ಹೊಂದುವುದಿಲ್ಲ ಎಂದರು.

ಕಳೆದ ಐದು ವರ್ಷದಲ್ಲಿ ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರೇ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯುತ್ತಿತ್ತು. ಕಳೆದ ಭಾರಿ ಶಾಸಕರಾಗಿದ್ದ ಅನ್ನದಾನಿ ಅವರ ನಿರ್ಲಕ್ಷ್ಯತೆಯಿಂದ ಕೊನೆಯ ಭಾಗಕ್ಕೆ ನೀರು ತಲುಪಲು ಕಷ್ಟವಾಗುತ್ತಿದೆ, ಅಧಿಕಾರಕ್ಕೆ ಬಂದಿರುವ ನರೇಂದ್ರಸ್ವಾಮಿ ಅವರು ಎಲ್ಲಾವನ್ನು ಸರಿಪಡಿಸುತ್ತಾರೆಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸರ್ಕಾರದಿಂದ ಈಗಾಗಲೇ ನೂರಾರು ಕೋಟಿ ಹಣ ಬಿಡುಗೊಳಿಸಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ತಾಲೂಕಿನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಿರುಗಾವಲು ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆ ಮುಕ್ತಾಯ ಹಂತದಲ್ಲಿದೆ. ನಾಲೆಗಳ ಆಧುನೀಕರಣ ನಡೆಯುತ್ತಿದೆ. ಪ್ರಜಾಸೌಧ ನಿರ್ಮಾಣಕ್ಕೆ ೧೯ ಕೋಟಿ ಬಿಡುಗಡೆಗೊಂಡಿದೆ. ಪ್ರಥಮ ದರ್ಜೆ ಪದವಿ ಕಾಲೇಜು ಉಳಿಸುವುದರ ಜೊತೆಗೆ ನಿವೇಶನ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ನಿಮ್ಮ ಆಡಳಿತದಲ್ಲಿ ಯಾವುದಾದರೂ ಒಂದು ಮಾಡಿರುವ ಸಾಕ್ಷಿ ತೋರಿಸಿ ಎಂದರು.

ಮನ್‌ಮುಲ್ ನಿರ್ದೇಶಕ ಆರ್.ಎನ್. ವಿಶ್ವಾಸ್ ಮಾತನಾಡಿ, ಸರ್ಕಾರಿ ಭೂಮಿಯನ್ನು ಹೆಚ್ಚಾಗಿ ಯಾರ ಅವಧಿಯಲ್ಲಿ ಕಬಳಿಕೆ ಆಗಿದೆ. ಈಗಾಗಲೇ ಅಮಾನತುಗೊಂಡಿರುವ ಅಧಿಕಾರಿಗಳು ಯಾರ ಕಾಲದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನುವುದನ್ನು ಮಾಜಿ ಶಾಸಕರು ಅರಿಯಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಶಾಸಕರು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸರ್ಕಾರದಿಂದ ಸಂಗಪ್ಪ ಅವರ ನೇತೃತ್ವದ ತಂಡ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ, ಕಬಳಿಕೆ ಆಗಿರುವ ಭೂಮಿಯನ್ನು ವಾಪಸ್ ಪಡೆಯಬೇಕೆಂಬುವುದು ನಮ್ಮೇಲ್ಲಾರ ಆಶಯವಾಗಿದೆ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಕೆ.ಜೆ ದೇವರಾಜು, ಮಾರ್ಕಾಲು ಮಾಧು, ಸುಜಾತ ಕೆ.ಎಂ ಪುಟ್ಟು, ಕುಳ್ಳಚನ್ನಂಕಯ್ಯ, ದ್ಯಾಪೇಗೌಡ, ವಿಶ್ವ, ಜಯರಾಜು, ಪ್ರಕಾಶ್, ಕಿರಣ್‌ಶಂಕರ್, ಮಹದೇವಯ್ಯ, ಶಿವಮಾದೇಗೌಡ, ರೋಹಿತ್‌ಗೌಡ, ಶಿವಸ್ವಾಮಿ ರವೀಂದ್ರ, ಶಾಂತರಾಜು, ಸೇರಿದಂತೆ ಇತರರು ಇದ್ದರು.

Share this article