ವಿರೋಧದ ನಡುವೆಯೂ ಟೋಲ್‌ ಸಂಗ್ರಹಕ್ಕೆ ಚಾಲನೆ

KannadaprabhaNewsNetwork | Published : Dec 17, 2024 12:45 AM

ಸಾರಾಂಶ

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಸಂಪೂರ್ಣ ಮುಗಿಯುವ ಮುನ್ನವೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರದವರ ಕ್ರಮವನ್ನು ಖಂಡಿಸಿ ಸೋಮವಾರ ಕರವೇ ಸೇರಿದಂತೆ ವಿವಿಧ ಸಂಘಟನೆಗಳು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಚೌಲಗೆರೆ ಬಳಿ ಪ್ರತಿಭಟನೆ ನಡೆಸಿದವು.ಆಲೂರು ಬಳಿಯ ಚೌಲಗೆರೆ ಗ್ರಾಮದ ಸುಂಕ ವಸಲಾತಿ ಕೇಂದ್ರದಲ್ಲಿ ವಾಹನಗಳಿಂದ ಟೋಲ್ ಹಣವನ್ನ ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಯಿತು.

ಕನ್ನಡಪ್ರಭ ವಾರ್ತೆ ಆಲೂರು

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಸಂಪೂರ್ಣ ಮುಗಿಯುವ ಮುನ್ನವೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರದವರ ಕ್ರಮವನ್ನು ಖಂಡಿಸಿ ಸೋಮವಾರ ಕರವೇ ಸೇರಿದಂತೆ ವಿವಿಧ ಸಂಘಟನೆಗಳು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಚೌಲಗೆರೆ ಬಳಿ ಪ್ರತಿಭಟನೆ ನಡೆಸಿದವು. ಸ್ಥಳೀಯ ವಾಹನಗಳಿಗೆ ಪಾಸ್‌ಗಳನ್ನು ವಿತರಿಸದೆ, ರಸ್ತೆಗಳಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೆ, ವಾಹನ ಸವಾರರಿಗೆ ಶೌಚಾಲಯ ವ್ಯವಸ್ಥೆ ಮಾಡಿಕೊಡದೆ, ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸದೆ ಇದರ ಜೊತೆಗೆ ಅವೈಜ್ಞಾನಿಕವಾಗಿ ಹಾಗೂ ಕಳಪೆ ಕಾಮಗಾರಿಯನ್ನ ಮಾಡುವುದರ ಜೊತೆಗೆ ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುತ್ತ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಆಲೂರು ಬಳಿಯ ಚೌಲಗೆರೆ ಗ್ರಾಮದ ಸುಂಕ ವಸಲಾತಿ ಕೇಂದ್ರದಲ್ಲಿ ವಾಹನಗಳಿಂದ ಟೋಲ್ ಹಣವನ್ನ ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಟೋಲ್ ಸಂಗ್ರಹ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರ ಕಂಪನಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಹಾಗೂ ನಾರಾಯಣಗೌಡ ಬಣದ ವತಿಯಿಂದ ಪ್ರತ್ಯೇಕ ಪ್ರತ್ಯೇಕ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆಜೈ ಕರ್ನಾಟಕ, ಭೀಮ್ ಆರ್ಮಿ, ಟಿಪ್ಪು ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಹೆದ್ದಾರಿಯ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರುವ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದರು.

ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಆಗಮಿಸುವವರೆಗೂ ಕೂಡ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದರಿಂದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್, ತಹಸೀಲ್ದಾರ್ ನಂದಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್‌ ಗಂಗಾಧರ್‌ ಇವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸ್ಥಳದ ಪರಿಸ್ಥಿತಿಯನ್ನ ಮನವರಿಕೆ ಮಾಡಿಕೊಟ್ಟ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ಹಾಗೂ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ ಕೆ.ಎಂ ಶೃತಿ ಸ್ಥಳಕ್ಕೆ ದೌಡಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್‌ರನ್ನು ಸ್ಥಳಕ್ಕೆ ಕರೆಯಿಸಿ ಪ್ರತಿಭಟನಾಕಾರರ ಬೇಡಿಕೆ ಮತ್ತು ಸಲಹೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಆದರೆ ಪ್ರತಿಭಟನಾಕಾರರ ಬೇಡಿಕೆ ಮತ್ತು ಅಹವಾಲುಗಳಿಗೆ ಹೆದ್ದಾರಿ ಅಧಿಕಾರಿ ಪ್ರವೀಣ್ ಸ್ಪಂದಿಸದೆ ಇದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ಪ್ರವೀಣ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ನಮಗೆ ನಮ್ಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ದಿನದಿಂದ ಇಲ್ಲಿ ವಾಹನಗಳಿಗೆ ಸುಂಕವನ್ನು ವಸೂಲಾತಿ ಮಾಡುವಂತೆ ಆದೇಶ ನೀಡಿದೆ. ಅದರಂತೆ ನಾವು ಸುಂಕ ವಸೂಲಾತಿಗೆ ಚಾಲನೆ ನೀಡಿದ್ದೇವೆ. ನಾವು ಸರ್ಕಾರ ಹೇಳಿದ ಹಾಗೆ ಕೇಳಬೇಕೆ ಹೊರತು ಪ್ರತಿಭಟನಾಕಾರರು ಹೇಳಿದಂತೆ ನಾನು ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನಿಷ್ಟುರವಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಕಲೇಶಪುರ ಉಪವಿಭಾಗಾಧಿಕಾರಿಗಳು ಪ್ರತಿಭಟನಾಕಾರರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರ ಜೊತೆಯೂ ಕೂಡ ಪ್ರತ್ಯೇಕ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ದಿನಾಂಕ 17 ಡಿಸೆಂಬರ್ 2024ರ ಮಂಗಳವಾರ ಬೆಳಿಗ್ಗೆ 11:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನಾನಿರತರ, ಸ್ಥಳೀಯ ಮುಖಂಡರ ಜೊತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಒಳಗೊಂಡಂತೆ ಸಭೆಯನ್ನು ನಿಗದಿಪಡಿಸಿ ಆ ಸಭೆಯಲ್ಲಿ ತಮ್ಮ ಬೇಡಿಕೆ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ದೂರವಾಣಿಯಲ್ಲಿ ತಿಳಿಸಿದ ನಂತರ ಜಿಲ್ಲಾ ಆಡಳಿತದ ಮನವಿಗೆ ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಕರವೇ ಜಿಲ್ಲಾ ಅಧ್ಯಕ್ಷರಾದ (ಪ್ರವೀಣ್ ಶೆಟ್ಟಿ ಬಣ ) ಸತೀಶ್ ಪಟೇಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿ ನಾವು ಇಂದು ಪ್ರತಿಭಟನೆಯನ್ನು ಸ್ಥಗಿತಗೊಳಿಸುತ್ತಿದ್ದು, ನಾಳೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಹಾಗೂ ಅಹವಾಲುಗಳಿಗೆ ನ್ಯಾಯ ಸಿಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡಲಾಗುವುದು. ಈ ದಿನ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು ಬೇಡಿಕೆಗಳು ಈಡೇರದಿದ್ದರೆ ಮುಂದಾಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತ ಜಿಲ್ಲಾಡಳಿತಾವೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜೈ ಕರ್ನಾಟಕ ಅಧ್ಯಕ್ಷ ಸಂದೇಶ, ಜೈ ಭೀಮ್ ಆರ್ಮಿ ಅಧ್ಯಕ್ಷ ಜಗದೀಶ್, ಕನ್ನಡಪರ ಹೋರಾಟಗಾರ ಬಾಳ್ಳು ಗೋಪಾಲ್‌, ಸಂಘಟನೆಗಳ ಅಧ್ಯಕ್ಷರು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.*ಹೇಳಿಕೆ 1 : ಟೋಲ್ ಸಂಗ್ರಹಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಫ್ಲೈ ಓವರ್‌ಗಳ ಕಾಮಗಾರಿ ಅಪೂರ್ಣಗೊಂಡಿದೆ. ಮಾರನಹಳ್ಳಿ ಬಳ್ಳಿ 12 ಕಿಲೋಮೀಟರ್ ರಸ್ತೆ ಕಾಮಗಾರಿ ಬಾಕಿ ಇದೆ. ತುಂಡು ಗುತ್ತಿಗೆ ನೀಡಿದ್ದರಿಂದ ಕಳಪೆ ಕಾಮಗಾರಿ ನಡೆಸಲಾಗಿದ್ದು ರಸ್ತೆಗಳು ಅಲ್ಲಲ್ಲಿ ಕುಸಿಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ.

- ನಟರಾಜ್ ಕರವೇ ತಾ. ಅಧ್ಯಕ್ಷ( ನಾರಾಯಣ ಗೌಡ ಬಣ)--------------------------------------------------------------------------

Share this article