ಕನ್ನಡಪ್ರಭ ವಾರ್ತೆ ಮಂಗಳೂರು
ಸುಮಾರು ಮೂರು ಗಂಟೆಗೂ ಅಧಿಕ ಕಾಲ ನಡೆದ ಪ್ರತಿಭಟನೆ ನಡೆದಿದ್ದು, ಅಂತಿಮವಾಗಿ ಸೆ. 5ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ, ಒಕ್ಕೂಟದ ಬೇಡಿಕೆಯಂತೆ ಜಿಲ್ಲಾಧಿಕಾರಿ ಆದೇಶ ವಾಪಾಸ್ ಪಡೆಯುವುದು ಹಾಗೂ ಇ ರಿಕ್ಷಾ ವಾಹನಗಳ ನೋಂದಣಿ ತಡೆಯುವ ಕುರಿತಂತೆ ಸಭೆ ನಡೆಸುವ ನಿರ್ಧಾರವನ್ನು ಆರ್‌ಟಿಒ ಶ್ರೀಧರ್ ಮಲ್ಲಾಡ್‌ರವರು ಘೋಷಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಒಕ್ಕೂಟದಿಂದ ನಿರ್ಣಯಿಸಲಾಗಿದ್ದ ಜಿಲ್ಲಾಧಿಕಾರಿ ಕಚೇರಿ ಚಲೋಗೆ ಅವಕಾಶ ನಿರಾಕರಣೆಯ ಹಿನ್ನೆಲೆಯಲ್ಲಿ ಕ್ಲಾಕ್‌ಟವರ್ ಬಳಿ ಪ್ರತಿಭಟನಾ ಪ್ರದರ್ಶನ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ತಮ್ಮ ಮನವಿ ಸ್ವೀಕರಿಸಿ ಆದೇಶವನ್ನು ಹಿಂಪಡೆಯಬೇಕು ಎಂದು ಆರಂಭದಲ್ಲಿ ಪ್ರತಿಭಟನಾಕಾರರು ಪಟ್ಟು ಹಿಡಿದರು.ಜಿಲ್ಲಾಧಿಕಾರಿ ಪರವಾಗಿ ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಭೇಟಿ ನೀಡಿದಾಗ, ಆದೇಶ ಹಿಂಪಡೆಯಲು ಅಧಿಕಾರ ಇಲ್ಲದಾಗ ಮನವಿ ಸ್ವೀಕರಿಸಿ ಪ್ರಯೋಜನವಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಆಗಮಿಸಬೇಕು. ಇಲ್ಲವೇ ಆರ್‌ಟಿಒ ಬರಬೇಕು ಎಂದು ಪ್ರತಿಭಟನಾ ನಿರತ ರಿಕ್ಷಾ ಚಾಲಕರು- ಮಾಲೀಕರು ತಮ್ಮ ಪಟ್ಟು ಮುಂದುವರಿಸಿದಾಗ ಆರ್‌ಟಿಒ ಶ್ರೀಧರ್ ಮಲ್ಲಾಡ್ ಸ್ಥಳಕ್ಕೆ ಭೇಟಿ ನೀಡಿದರು.ಸುಮಾರು ಮೂರು ಗಂಟೆಗಳ ಕಾಲ ತಮ್ಮ ಪಟ್ಟು ಮುಂದುವರಿಸಿದ ಪ್ರತಿಭಟನಾ ನಿರತರು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಿಖಿತ ಆದೇಶ ನೀಡುವವರೆಗೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.
ಪಾಲಿಕೆ ಚುನಾವಣೆಯಲ್ಲಿ ರಿಕ್ಷಾ ಚಾಲಕರನ್ನು ಕಣಕ್ಕಿಳಿಸಲು ನಿರ್ಧಾರ
ಪಾಲಿಕೆ ಚುನಾವಣೆಯಲ್ಲಿ ರಿಕ್ಷಾ ಚಾಲಕರು ಕೂಡಾ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲಿದ್ದಾರೆ ಎಂದು ಒಕ್ಕೂಟದ ಮುಖಂಡ ಭರತ್ ಕುಮಾರ್ ಪ್ರತಿಭಟನಾ ಸಭೆಯವಲ್ಲಿ ಪ್ರಕಟಿಸಿದರು.