ಬೆಂಗಳೂರು : ಬಿಎಂಟಿಸಿ ಬಸ್‌ಗಳಿಂದ ಅಪಘಾತ ಹೆಚ್ಚುತ್ತಿರುವುದನ್ನು ತಡೆಯಲು ಬಿಎಂಟಿಸಿ ಚಾಲಕರಿಗೆ ವಲಯವಾರು ವಾರದಲ್ಲಿ ಎರಡು ಬಾರಿ ಚಾಲನಾ ತರಬೇತಿ ನೀಡಲು ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಶಾಂತಿನಗರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬಿಎಂಟಿಸಿ ಬಸ್‌ಗಳಿಂದಾಗುತ್ತಿರುವ ಅಪಘಾತ ನಿಯಂತ್ರಣಕ್ಕೆ ಚರ್ಚೆ ನಡೆಸಲಾಯಿತು. ಈ ವೇಳೆ ಅಪಘಾತ ರಹಿತ ಚಾಲನೆ ಕುರಿತು ಚಾಲಕರಲ್ಲಿ ಅರಿವು ಮೂಡಿಸುವುದು ಮತ್ತು ಸೂಕ್ತ ತರಬೇತಿ ನೀಡುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಆರ್. ರಾಮಚಂದ್ರನ್, ಬಿಎಂಟಿಸಿಯ ಎಲ್ಲ ಘಟಕಗಳಲ್ಲಿ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಸಭೆ ನಡೆಸಿ ಚಾಲಕರಿಗೆ ಸುರಕ್ಷಾ ಚಾಲನೆ ಮತ್ತು ನಿಯಮ ಪಾಲನೆ ಕುರಿತು ಸೂಚನೆ ನೀಡಬೇಕು. ವಲಯವಾರು ವಾರದಲ್ಲಿ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿ ನೀಡಬೇಕು. ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಯುವ ನಿಟ್ಟಿನಲ್ಲಿ ರೂಪಿಸಿರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಕರ್ತವ್ಯ ನಿರತ ಬಿಎಂಟಿಸಿ ಚಾಲಕರು ಮೊಬೈಲ್‌ನಲ್ಲಿ ಮಾತನಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚಾಲಕರನ್ನು 15 ದಿನಗಳ ಅಮಾನತು ಮಾಡಿ, ಚಾಲಕನ ಮೊಬೈಲ್ ವಶಪಡಿಸಿಕೊಳ್ಳಲಾಗುವುದು. ಜತೆಗೆ ಬೇರೆ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು. ಇನ್ನು, ಮದ್ಯಪಾನ ಮಾಡಿ ಬಸ್ ಚಲಾಯಿಸಿದರೆ, ಮಾರಣಾಂತಿಕ ಅಪಘಾತ ಮಾಡಿದರೆ ಅಮಾನತು ಮಾಡಲಾಗುವುದು ಎಂಬುದನ್ನು ಚಾಲಕರಿಗೆ ಮನದಟ್ಟು ಮಾಡಬೇಕು ಎಂದರು.
20 ಚಾಲಕರ ಅಮಾನತು
ಆಗಸ್ಟ್ ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಿಂದ ಒಟ್ಟು 4 ಮಾರಣಾಂತಿಕ ಅಪಘಾತಗಳಾಗಿವೆ. ಅದರಲ್ಲಿ 3 ಪ್ರಕರಣಗಳು ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಉಳಿದೊಂದು ಅಪಘಾತ ಇ-ಬಸ್ ಚಾಲಕನಿಂದ ಸಂಭವಿಸಿದೆ. ಹಾಗೆಯೇ, ಕಳೆದೊಂದು ವರ್ಷದಲ್ಲಿ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.