ಚಿಕ್ಕಮಗಳೂರಿಗೆ ಕಾಡಾನೆಗಳನ್ನು ಅಟ್ಟಿ ಜನರ ಜೀವದ ಜೊತೆ ಚೆಲ್ಲಾಟ: ಡಾ.ಸಿ.ಟಿ.ರವಿ

KannadaprabhaNewsNetwork |  
Published : Nov 24, 2026, 12:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಅಟ್ಟುವ ಮೂಲಕ ಇಲ್ಲಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಚಿಕ್ಕಮಗಳೂರಿನ ಜನರ ಜೀವಕ್ಕೆ ಬೆಲೆ ಇಲ್ಲವೇ? ಜನರು ಸತ್ತರೂ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆಯೇ ಎಂದು ವಿಧಾನಪರಿಷತ್ತ್ ಸದಸ್ಯ ಡಾ.ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಸಮಸ್ಯೆ ಮೂಲ ಕಾರಣ ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ: ಆರೋಪ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹಾಸನ ಜಿಲ್ಲೆಯಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಅಟ್ಟುವ ಮೂಲಕ ಇಲ್ಲಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಚಿಕ್ಕಮಗಳೂರಿನ ಜನರ ಜೀವಕ್ಕೆ ಬೆಲೆ ಇಲ್ಲವೇ? ಜನರು ಸತ್ತರೂ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆಯೇ ಎಂದು ವಿಧಾನಪರಿಷತ್ತ್ ಸದಸ್ಯ ಡಾ.ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಡಾನೆಗಳು ಹಾಸನದಿಂದ ಚಿಕ್ಕಮಗಳೂರಿಗೆ ಬರುತ್ತಿರು ವುದನ್ನು ಗಮನಿಸಿದರೆ ಸರ್ಕಾರ ಸಮಸ್ಯೆ ಮೂಲ ಕಾರಣ ಹುಡುಕುವ ಪ್ರಯತ್ನವನ್ನೇ ಮಾಡಿಲ್ಲ ಎಂಬುದು ಸ್ಪಷ್ಟ. ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಕಾಡಾನೆಗಳನ್ನು ಚಿಕ್ಕಮಗಳೂರಿಗೆ ಏಕೆ ಅಟ್ಟುತ್ತಿದ್ದಾರೆ? ಅವರು ಹಾಸನ ಜಿಲ್ಲೆಯ ಸಚಿವರೇ ಹೊರತು ಇಡೀ ಕರ್ನಾಟಕ ರಾಜ್ಯದ ಉಸ್ತುವಾರಿ ಸಚಿವರಲ್ಲ ಎಂದು ಟೀಕಿಸಿದರು.ಕಾಡಾನೆಗಳೇನು ದನಗಳಲ್ಲ. ಅವುಗಳನ್ನು ಹಿಡಿದು ಕಟ್ಟಿ ಹಾಕಲು ಅಥವಾ ದೊಡ್ಡಿಯಲ್ಲಿ ಕೂಡಿ ಹಾಕಲು. ಸಾಧ್ಯವಾದರೆ ನಿಮ್ಮ ಮನೆ ಬಳಿಯೇ ಹಿಡಿದುಕೊಂಡು ಹೋಗಿ ಕಟ್ಟಿಹಾಕಿಕೊಳ್ಳಿ. ಆನೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವಾಗ ಅನಾಹುತ ಸಂಭವಿಸುತ್ತವೆ. ಇದನ್ನು ಅರ್ಥಮಾಡಿಕೊಳ್ಳದೆ ಸರ್ಕಾರ ವರ್ತಿಸುತ್ತಿದೆ. ಚಿಕ್ಕಮಗಳೂರಿನ ಜನರ ಸುರಕ್ಷತೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದಕ್ಕೆ ಕಾರಣ ಹುಡುಕಬೇಕಿದೆ. ಕಾಡಿನಲ್ಲಿ ಮೇವು ಮತ್ತು ನೀರು ದೊರೆ ಯುತ್ತಿದ್ದರೆ ಅವು ನಾಡಿಗೆ ಏಕೆ ಬರುತ್ತಿದ್ದವು? ಅಕೇಶಿಯ, ನೀಲಗಿರಿ ಹಾಗೂ ಸಾಗುವಾನಿ ನೆಡುತೋಪು ಬೆಳೆಸುವ ಮೂಲಕ ಸಹಜ ಅರಣ್ಯ ನಾಶ ಮಾಡಿದ್ದು, ಆನೆಗಳಿಗೆ ಆಹಾರ ಮತ್ತು ನೀರಿನ ಕೊರತೆ ಉಂಟಾಗಲು ಕಾರಣವಾಗಿದೆ. ಮೊದಲು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಲ್ಲಿವರೆಗೆ ಆನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಟ್ಟುವುದರಿಂದ ಸಮಸ್ಯೆ ಬಗೆಹರಿಯಲ್ಲ ಎಂದರು.ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ಈವರೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಆನೆಗಳನ್ನು ರಾಜಕೀಯ ಪ್ರೇರಿತವಾಗಿ ಕಳುಹಿಸಿದ್ದಾರೆ ಎಂಬ ಬಾಲಿಶ ಹೇಳಿಕೆ ನೀಡುವುದೂ ಸರಿಯಲ್ಲ. ಚಿಕ್ಕಮಗಳೂರಿನತ್ತ ಆನೆಗಳನ್ನು ಅಟ್ಟುವ ಕ್ರಮದ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸಿದರು.ಶಾಸಕರ ರಾಜೀನಾಮೆ ಹೇಳಿಕೆಗೆ ಟೀಕೆ; ಕಾಡಾನೆ ಸ್ಥಳಾಂತರ ವಿಚಾರವಾಗಿ ಜಿಲ್ಲೆಯ ಮೂವರು ಶಾಸಕರು ರಾಜೀನಾಮೆ ನೀಡುವುದಾಗಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರ ಆಕ್ರೋಶ ತಮ್ಮ ಮೇಲೆ ಬೀಳದಂತೆ ತಡೆಯಲು ರಾಜೀನಾಮೆ ಹೇಳಿಕೆ ನೀಡುತ್ತಿದ್ದಾರೆ. ನೀವು ರಾಜೀನಾಮೆ ನೀಡುವುದಾಗಿ ಹೇಳುವ ಬದಲು, ಚಿಕ್ಕಮಗಳೂರಿಗೆ ಆನೆ ಗಳನ್ನು ಅಟ್ಟುವುದಾಗಿ ಹೇಳಿರುವ ಸಚಿವ ಶಿವಲಿಂಗೇಗೌಡರ ರಾಜೀನಾಮೆಗೆ ಆಗ್ರಹಿಸಬೇಕಿತ್ತು. ಇಲ್ಲವೇ ಆನೆಗಳನ್ನು ಸ್ಥಳಾಂತರಿಸುವುದನ್ನು ತಡೆಯಬೇಕಿತ್ತು. ಆದರೆ, ಎರಡನ್ನೂ ಮಾಡದೆ ರಾಜೀನಾಮೆ ಪ್ರಹಸನ ನಡೆಸಲಾಗುತ್ತಿದೆ ಎಂದು ಟೀಕಿಸಿದರು.ರಾಜೀನಾಮೆ ನೀಡುವುದಿಲ್ಲ ಎಂಬುದು ತಮಗೆ ಗೊತ್ತಿದೆ. ನೀಡಿದರೂ ಸ್ವೀಕೃತವಾಗದ ರೀತಿಯಲ್ಲಿ ಪತ್ರ ಸಲ್ಲಿಸುವ ಸಾಧ್ಯತೆ ಯಿದೆ. ರಾಜೀನಾಮೆ ಪತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಒಂದೇ ಸಾಲಿನ ಸ್ಪಷ್ಟ ಹೇಳಿಕೆ ಇರ ಬೇಕು. ಪತ್ರದಲ್ಲಿ ಕಥೆ, ಪುರಾಣ ಬರೆದರೆ ರಾಜೀನಾಮೆ ಸ್ವೀಕಾರವಾಗಲ್ಲ ಎಂದು ಹೇಳಿದರು.ಚಿಕ್ಕಮಗಳೂರಿನ ಜನರ ಸುರಕ್ಷತೆ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಮ್ಮ ಜಿಲ್ಲೆ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಕ್ರಮ ತಡೆಯಲು ಮುಂದಾಗಬೇಕು ಎಂದು ಡಾ.ಸಿ.ಟಿ.ರವಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೃಜನತ್ಮಕ ಸಾಧ್ಯತೆಗಳ ಗುರುತಿಸಿ ಮುನ್ನಡೆಯಿರಿ
ಖಂಡೇರಾಯನಪಲ್ಲಿಯಲ್ಲಿ ವಿದ್ಯುತ್‌ ಉಪಕೇಂದ್ರ ಉದ್ಘಾಟನೆ