ಎಸ್.ಎಂ. ಸೈಯದ್ಗಜೇಂದ್ರಗಡ: ಕಳೆದ 15 ದಿನಗಳಿಂದ ಸಮೀಪದ ಕಾಲಕಾಲೇಶ್ವರ ಗ್ರಾಮದ ಸುತ್ತಲಿನ ಪ್ರದೇಶದ ಗ್ರಾಮಸ್ಥರ ಕಣ್ಣಿಗೆ ಬಿದ್ದಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದರೂ ಸೆರೆಯಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆ ಚುರುಕುಗೊಳಿಸಿರುವ ಅರಣ್ಯ ಇಲಾಖೆಯು ಬುಧವಾರ ಡ್ರೋನ್ ಮೂಲಕ ಪತ್ತೆಗಿಳಿದಿದೆ.
ಬಳಿಕ ಗ್ರಾಮಸ್ಥರು ಹಾಗೂ ಕರ್ತವ್ಯದಲ್ಲಿದ್ದ ತಾಲೂಕು ಮಟ್ಟದ ಅರಣ್ಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಅವರು, ಕಾಲಕಾಲೇಶ್ವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಟದ ದೂರಿನ ಹಿನ್ನೆಲೆ ಅದನ್ನು ಹಿಡಿಯಲು ಈಗಾಗಲೇ ೨ ಬೋನ್‌ಗಳನ್ನು ಇರಿಸಲಾಗಿದೆ. ಬುಧವಾರದಿಂದ ಡ್ರೋನ್ ಮೂಲಕ ಚಿರತೆ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ರಾತ್ರಿ ವೇಳೆ ಗಸ್ತು ನಡೆಸಲಿದ್ದಾರೆ. ಹೀಗಾಗಿ ಗ್ರಾಮಸ್ಥರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಚಿರತೆ ಶೋಧ ನಡೆಸುತ್ತಿದ್ದು, ಗ್ರಾಮಸ್ಥರು ಎಚ್ಚರಿಕೆಯೊಂದಿಗೆ ಇರುವುದರ ಜತೆಗೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.ಸ್ಪಂದಿಸದ ಗ್ರಾಪಂ: ಆರೋಪ
ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿರುವ ಕೆಲ ರೈತಾಪಿ ಕುಟುಂಬಗಳು ದನಕರು, ಆಡು, ಕುರಿ ಸಾಕಾಣಿಕೆ ನಡೆಸುತ್ತಿವೆ. ಹೀಗಾಗಿ ಚಿರತೆ ದನಕರು, ಆಡು ಹಾಗೂ ಕುರಿ ಮೇಲೆ ದಾಳಿ ನಡೆಸಲು ಬರುತ್ತದೆ. ಈ ಹಿಂದೆ ದನದ ಶೆಡ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಅಗತ್ಯ ನೆರವು ನೀಡದ ಪರಿಣಾಮ ಇಂದಿಗೂ ದನದ ಶೆಡ್‌ಗಳ ನಿರ್ಮಾಣ ಆಗಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.ತಾಲೂಕಿನಲ್ಲಿ ೨೦೨೨ರಿಂದ ಇಲ್ಲಿಯವರೆಗೆ ಭೈರಾಪುರ ತಾಂಡಾ, ವದೆಗೋಳ ಹಾಗೂ ನಾಗೇಂದ್ರಗಡ ಗ್ರಾಮದಲ್ಲಿ ತಲಾ ಒಂದರಂತೆ ಚಿರತೆ ಸೆರೆ ಹಿಡಿಯಲಾಗಿದೆ. ಈಗ ಕಾಲಕಾಲೇಶ್ವರ ಗ್ರಾಮದ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟದ ಕುರಿತು ಗ್ರಾಮಸ್ಥರಿಂದ ದೂರು ಬಂದ ಪರಿಣಾಮ ಕಾಲಕಾಲೇಶ್ವರ ಸೇರಿ ಸುತ್ತಲಿನ ಗ್ರಾಮಸ್ಥರಲ್ಲಿ ಚಿರತೆ ದಾಳಿಯ ಆತಂಕ ಕಾಡಲಾರಂಭಿಸಿದೆ.ಕಾರ್ಯಾಚರಣೆ: ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಲಕಾಲೇಶ್ವರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಬಳಿಯ ಜಿನೆಪ್ಪಕೊಳ್ಳ ಸಮೀಪ ೨ ಬೋನ್ ಇರಿಸಿದ್ದು, ಚಿರತೆಯನ್ನು ಬೋನ್‌ಗೆ ಕೆಡವಲು ಬೋನಿನ ಇನ್ನೊಂದು ಬದಿಯಲ್ಲಿ ನಾಯಿ ಕಟ್ಟಲಾಗಿದೆ. ೪ ಜನ ಸಿಬ್ಬಂದಿ ಗಸ್ತು ಜತಗೆ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಗಜೇಂದ್ರಗಡ ಉಪವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಸಾಸ್ವಿಹಳ್ಳಿ ತಿಳಿಸಿದರು.