ರಫೀಕ್ ಕಲೇಗಾರ
ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಕ್ವಿಂಟಲ್‌ಗೆ ₹2,000ರಿಂದ ₹2,400ರ ವರೆಗೆ ದರವಿದ್ದರೂ ಬೆಲೆ ಏರಿಕೆಯ ಖುಷಿ ರೈತರಿಗಿಲ್ಲ. ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕುಸಿತವಾಗಿದ್ದು ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ರೈತರು ಮೆಕ್ಕೆಜೋಳ ಒಣಗಲು ಹಾಕಿರುವ ದೃಶ್ಯ ಬೆಳೆ ಸಂಕಷ್ಟಕ್ಕೆ ಸಾಕ್ಷಿಯಾಗಿದೆ. ಬೆಲೆ ಇದೆ, ಆದರೆ, ಮಾರಾಟಕ್ಕೆ ಉತ್ಪನ್ನವೇ ಇಲ್ಲ. ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೆಸರು, ಉದ್ದು ಬೆಳೆಗಳ ಬೆನ್ನಲ್ಲೇ ಮೆಕ್ಕೆಜೋಳವೂ ರೈತರ ಕೈಹಿಡಿಯದಂತಾಗಿದೆ.ಸ್ಥಳೀಯ ರೈತ ಬಾಬಾಜಾನ್ ಹಿರೇನಾಯ್ಕರ್ 12 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದು ಎಕರೆಗೆ 8ರಿಂದ 10 ಕ್ವಿಂಟಲ್ ವರೆಗೆ ಇಳುವರಿ ಬರಲಿದೆ ಎಂದು ನಿರೀಕ್ಷಿಸಿದ್ದರು. ಆದರೆಮ ಮಳೆ ಕೊರತೆಯಿಂದ ಎಕರೆಗೆ ಕ್ವಿಂಟಲ್ ಸಹ ಬಂದಿಲ್ಲ. ಬೀಜ, ಗೊಬ್ಬರ, ಔಷಧ, ಬಿತ್ತನೆ ಹಾಗೂ ಉಳುಮೆ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಆದರೆ, ಬಂದಿರುವ ಬೆಳೆ ನೋಡಿದರೆ ಮಾಡಿದ ಖರ್ಚು ಕೂಡ ಸರಿದೂಗುವುದಿಲ್ಲ. ಮಳೆ ಆಗದೆ ಬೆಳೆ ಹಾಳಾಯಿತು ಎಂದು ಅಳಲು ತೋಡಿಕೊಂಡರು.
510 ಹೆಕ್ಟೇರ್‌ನಲ್ಲಿ ಬಿತ್ತನೆ:
ಒಂದೆಡೆ ಬೆಲೆ ಏರಿಕೆ, ಮತ್ತೊಂದೆಡೆ ಇಳುವರಿ ಕುಸಿತ. ಉತ್ಪಾದನಾ ವೆಚ್ಚವೂ ಮರಳದ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರ ವಿಳಂಬ ಮಾಡದೆ ಬರ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.ಕಳೆದ ಬಾರಿಗಿಂದ ಈ ಬಾರಿ ಮೆಕ್ಕೆಜೋಳದ ದರ ಹೆಚ್ಚಾಗಿದೆ. ತಾಲೂಕಿನಲ್ಲಿ ಇಳುವರಿ ಸಂಪೂರ್ಣವಾಗಿ ಕುಂಟಿತವಾಗಿರುವುದರಿಂದ ಈವರೆಗೆ ಶೇ. 30ರಷ್ಟು ಬೆಳೆ ಮಾತ್ರ ಮಾರಾಟಕ್ಕೆ ಬಂದಿದೆ.
ಏನಾದರೂ ಲಾಭವಾಗಬಹುದು ಎಂದು ಮೂರು ಎಕರೆಯಲ್ಲಿ ಮೆಕ್ಕೆಜೋಳ ಹಾಕಿದ್ದೆವು. ಆದರೆ, ಇಳುವರಿಯೇ ಬರದೆ ನಷ್ಟವಾಗಿದೆ. ಹೀಗಾದರೆ ರೈತರ ಬದುಕು ತೀವ್ರ ಸಂಕಷ್ಟಕ್ಕೀಡಾಗಲಿದೆ.