ಕನ್ನಡಪ್ರಭ ವಾರ್ತೆ ಹನೂರು
ಡಾ.ಸುದಾಮ್ ಭಾಗ್ ನೇತೃತ್ವದ ಆರು ಸದಸ್ಯರ ಕೇಂದ್ರ ತಂಡ ಬೆಳಿಗ್ಗೆಯಿಂದಲೇ ಹನೂರು ತಾಲೂಕಿನ ಹಳ್ಳಿಗಳಲ್ಲಿ ಸಂಚರಿಸಿ ರೈತರ ಜಮೀನುಗಳಿಗೆ ತೆರಳಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಭಾನುಪ್ರಕಾಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಂಡಕ್ಕೆ ಸಾಥ್ ನೀಡಿದರು.
ಮೊದಲಿಗೆ ತಂಡವು ಹುಲ್ಲೇಪುರ ಗ್ರಾಮದ ರೈತ ಮಹಿಳೆ ರಾಜಮ್ಮಣ್ಣಿ ಅವರ ಜಮೀನಿಗೆ ಭೇಟಿ ನೀಡಿತು. ರಾಜಮ್ಮಣ್ಣಿ ಅವರು 2.42 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದೆ. ಬಿತ್ತನೆಗಾಗಿ ಮಾಡಿದ್ದ ಸಾಲ ತೀರಿಸುವುದು ಹೇಗೆ ಎಂದು ರೈತ ಮಹಿಳೆ ಕೇಂದ್ರ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡಬೇಕು ಎಂದು ಮನವಿ ಮಾಡಿದರು.ನಂತರ ತಂಡವು ಹುಬ್ಬೆಹುಣಸೆ ಗ್ರಾಮದ ರೈತ ಪ್ರಕಾಶ್ ಅವರ ಹೈನುಗಾರಿಕೆ ಡೇರಿಗೆ ಭೇಟಿ ನೀಡಿತು. ಪ್ರಕಾಶ್ ಸುಮಾರು 300 ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದು, ದಿನವೊಂದಕ್ಕೆ 2,500 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ತೀವ್ರ ಬರಗಾಲದಿಂದ ಮೇವಿನ ಅಭಾವ ಉಂಟಾಗಿದ್ದು, ಹೊರಗಿನಿಂದ ದುಬಾರಿ ಬೆಲೆ ತೆತ್ತು ಮೇವು ತರಬೇಕಾಗಿದೆ. ಅಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಗೋಶಾಲೆಗಳಿಗೆ ಮೇವು ಪೂರೈಕೆ ಹಾಗೂ ಹಾಲಿನ ದರ ಹೆಚ್ಚಳ ಮಾಡುವಂತೆ ಕೇಂದ್ರ ತಂಡಕ್ಕೆ ಪ್ರಕಾಶ್ ನಾಯ್ಡು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹನೂರು ಶಾಸಕ ಎಂ.ಆರ್.ಮಂಜುನಾಥ್, ಹನೂರು ತಾಲೂಕು ಅತ್ಯಂತ ಹಿಂದುಳಿದಿದ್ದು, ರೈತರು ಸಂಪೂರ್ಣವಾಗಿ ಮಳೆ ಆಧಾರಿತ ಕೃಷಿಯನ್ನು ನಂಬಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತರಿಗೆ ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ದಿನಗಳ ಕೆಲಸ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಶ್ರೀ ರೂಪ,ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮೊನರೋತ್, ತಾಲೂಕು ದಂಡಾಧಿಕಾರಿ ಚೈತ್ರ ಹಾಗೂ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ರೈತರು ಹಾಜರಿದ್ದರು.