2 ತಾಸು ತಡವಾಗಿ ಬಂದ ಬರ ಅಧ್ಯಯನ ತಂಡ: ಬಸವಳಿದ ರೈತರು

KannadaprabhaNewsNetwork |  
Published : Oct 06, 2026, 01:30 AM IST
5ಸಿಎಚ್ಎನ್‌14 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಕೇಂದ್ರ ಬರ ಅಧ್ಯಯನ ತಂಡವು ಬೆಳೆ ಹಾನಿ ವೀಕ್ಷಣೆ ಮಾಡಲಿದ್ದು ಕೆರೆಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಒಣಗಿದ್ದ ಜೋಳವನ್ನು ವೀಕ್ಷಿಸಿ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಕೇಂದ್ರ ಬರ ಅಧ್ಯಯನ ತಂಡವು ಬೆಳೆ ಹಾನಿ ವೀಕ್ಷಣೆ ಮಾಡಲಿದ್ದು ಕೆರೆಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಒಣಗಿದ್ದ ಜೋಳವನ್ನು ವೀಕ್ಷಿಸಿ ಮಾಹಿತಿ ಪಡೆದರು.

ಡಾ.ಸುದಾಮ್ ಭಾಗ್ ನೇತೃತ್ವದ ತಂಡ ಬರ ವೀಕ್ಷಣೆ ಮಾಡುತ್ತಿದ್ದು ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾ ರೋತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಭಾನುಪ್ರಕಾಶ್ ಅಧ್ಯಯನ ತಂಡಕ್ಕೆ ವಿವರವಾದ ಮಾಹಿತಿ ಒದಗಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಎರಡು ದಿನ ಡಾ.ಸುದಾಮ್ ಭಾಗ್ ನೇತೃತ್ವದ ಅಧಿಕಾರಿಗಳ ತಂಡ ಬರ ಅಧ್ಯಯನ ಕೈಗೊಂಡಿದ್ದು ಚಾಮರಾಜನಗರ ತಾಲೂಕಿನ ಕೆರೆಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ 11.50ಕ್ಕೆ ಅಧ್ಯಯನ ಆರಂಭವಾಗಬೇಕಿತ್ತು. ಆದರೆ, 1.30ಕ್ಕೆ ಬಂದಿದ್ದರಿಂದ ರೈತರು ಬಿಸಿಲಿನಲ್ಲಿ ಕಾದು ಕಾದು ಬಸವಳಿದರು.

ಸುಧಮ್ ಭಾಗ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡವು ತಡವಾಗಿ ಬಂದಿದ್ದರಿಂದ ರೈತರು ಬೇಸರಗೊಂಡರು. ಬೆಳಿಗ್ಗೆ 10ರಿಂದಲೇ ಬಂದು ಜಮೀನಿನಲ್ಲಿ ಕಾದು ಕುಳಿತಿದ್ದೇವೆ, ಇಷ್ಟು ತಡ ಮಾಡಿದರೆ ಹೇಗೆ ಎಂದು ಅಧಿಕಾರಿಗಳ ತಂಡಕ್ಕೆ ರೈತರು ಪ್ರಶ್ನಿಸಿ ಅಸಮಾಧಾನಗೊಂಡರು.

ಬೆಳೆಸಾಲ ಮನ್ನಾ ಮಾಡಿ:

ಕೆರೆಹಳ್ಳಿ ಗ್ರಾಮದ ರೈತ ಮಾದಪ್ಪ ಎಂಬವರ ಜಮೀನಿಗೆ ಭೇಟಿ ಕೊಟ್ಟ ಅಧ್ಯಯನ ತಂಡವು ಒಣಗಿದ್ದ ಫಸಲನ್ನು ವೀಕ್ಷಿಸಿದರು. ಸುತ್ತಮುತ್ತಲಿನ ಗ್ರಾಮದಲ್ಲಿ ಮೇವಿನ ಲಭ್ಯತೆ, ಮಳೆ ಪ್ರಮಾಣ, ಬಿತ್ತನೆ ಮಾಡಿದ್ದ ಬೆಳೆಗಳ ವಿವರವನ್ನು ಪಡೆದರು.

ಎಷ್ಟು ಬಂಡವಾಳ ಹಾಕಲಾಗಿತ್ತು, ನಿರೀಕ್ಷಿದ ಆದಾಯ ಮತ್ತು ಈಗಿನ ಬೆಳೆ ಸ್ಥಿತಿ ವಿವರಗಳನ್ನು ರೈತರು ನೀಡಿದರು. ಇದೇ ವೇಳೆ, ರೈತ ಚಿನ್ನಸ್ವಾಮಿ, ಮಲ್ಲಣ್ಣ, ಮಾದಪ್ಪ ಎಂಬುವರು ಮಾತನಾಡಿ, ರಾಜಕೀಯ ಕಾರಣ ಬದಿಗಿಟ್ಟು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರದೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈಗಿರುವ ಮಾನದಂಡದಲ್ಲಿ ಬೆಳೆ ಪರಿಹಾರ ನೀಡಿದರೆ ನಾವು ಗೊಬ್ಬರ, ಬಿತ್ತನೆಗೆ ಮಾಡಿದ್ದ ಹಣವೂ ಕೂಡ ಸಿಕ್ಕುವುದಿಲ್ಲ, ಕೃಷಿ ಸಾಲಮನ್ನಾ ಮಾಡಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

68 ಸಾವಿರ ಹೆಕ್ಟೇರ್ ಬೆಳೆಹಾನಿ: 84 ಕೋಟಿ ರು. ಪರಿಹಾರಕ್ಕೆ ಪ್ರಸ್ತಾವ:

ಬೆಳೆಹಾನಿ, ಕೆರೆ ವೀಕ್ಷಣೆ, ಗೋಶಾಲೆ ಭೇಟಿ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಪರಿಶೀಲನೆ ಬಳಿಕ ಗುಂಡ್ಲುಪೇಟೆ ತಾಲೂಕು ಪಂಚಾಯತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ವಿವರಿಸಿದರು.

ಚಾಮರಾಜನಗರ ಜಿಲ್ಲೆಯು ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು 41,770 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 26,530 ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದೆ. ಬಿತ್ತನೆ ಖರ್ಚು, ಗೊಬ್ಬರ, ಉಳುಮೆ ಸೇರಿದಂತೆ ವ್ಯವಸಾಯಕ್ಕಾಗಿ ರೈತರು ಅಂದಾಜು ಒಟ್ಟು 629 ಕೋಟಿ ರು. ನಷ್ಟವಾಗಿದೆ‌. ಎನ್‌ಡಿಆರ್‌ಎಫ್ ಮಾನದಂಡದಂತೆ 84 ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ಮತ್ತು ಮೇವಿಗೂ ಬರದಿಂದ ಸಮಸ್ಯೆ ಆಗಿದ್ದು ಹನೂರು ತಾಲೂಕಿನ 62 ಗ್ರಾಪಂ ವ್ಯಾಪ್ತಿಯ 71 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್ ಮಾತನಾಡಿ, ಹನೂರು ತಾಲೂಕಿನಲ್ಲಿ 800 ಅಡಿ ಆಳ ಬೋರ್ ವೆಲ್ ಕೊರೆದರೂ ನೀರು ಸಿಗಲು ಕಷ್ಟವಾಗಿದೆ ಎಂದರು.

ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಬರ ಅಧ್ಯಯನ ತಂಡಕ್ಕೆ ಸಂಪೂರ್ಣ ಮಾಹಿತಿ-ಡಿಸಿ:

ಕೇಂದ್ರ ಬರ ಅಧ್ಯಯನ ತಂಡವು ಮೊದಲನೇ ದಿನ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿದ್ದು ಕೇಂದ್ರದ ತಂಡಕ್ಕೆ ನಾವು ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‌ಬೇರೆ ಜಿಲ್ಲೆಗೆ ಹೊಲಿಸಿ ಕೊಂಡ್ರೆ ಚಾಮರಾಜನಗರದಲ್ಲಿ ಬರ ಹೆಚ್ಚಿದೆ, 68 ಸಾವಿರ ಹೆಕ್ಟೇರ್ ನಲ್ಲಿ ಬೆಳೆಹಾನಿ, 71 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ತಿಳಿಸಿದ್ದೇವೆ.‌ ಕುಡಿಯುವ ನೀರಿನ ಸಮಸ್ಯೆ ಮೇವಿನ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇವೆ ಎಂದರು.

ನಿಟ್ರೆಯಲ್ಲಿ ಒಣಗಿದ ಸೂರ್ಯಕಾಂತಿ: ನಲುಗಿದ ರೈತರು

ನಿಟ್ರೆ ಗ್ರಾಮದಲ್ಲಿ ಲೋಕೇಶ್ವರಿ ಎಂಬವರ ಸೂರ್ಯಕಾಂತಿ ಜಮೀನಿಗೆ ಭೇಟಿ ನೀಡಿದ ತಂಡವು ಒಣಗಿ ನಿಂತಿದ್ದ ಸೂರ್ಯಕಾಂತಿ ಗಿಡಗಳನ್ನು ವೀಕ್ಷಣೆ ಮಾಡಿದರು. ಮೇವಿಗೂ ಕೂಡ ಆಗಲಾರದಷ್ಟು ಬೆಳೆ ಸ್ಥಿತಿ ಇರುವುದನ್ನು ರೈತರಾದ ನಾಗರಾಜು, ಸಿದ್ದಶೆಟ್ಟಿ ಇತರರು ಅಳಲು ತೋಡಿಕೊಂಡರು. ಜಿಲ್ಲೆಯಲ್ಲಿ ಅತಿಹೆಚ್ಚು ಗುಂಡ್ಲುಪೇಟೆ ತಾಲೂಕಿನಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯಲಿದ್ದು ಪ್ರತಿವರ್ಷ ಹಾಕಿದ ಬಂಡವಾಳಕ್ಕಾದರೂ ಸಾಲುವಷ್ಟು ಹಣ ಬರುತ್ತಿತ್ತು. ಆದರೆ, ಈ ಬಾರಿ ಫಸಲೇ ಇಲ್ಲದಂತಾಗಿದೆ, ನಮಗೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು, ಒಂದೆಡೆ ಫಸಲಿಲ್ಲ- ಮತ್ತೊಂದೆಡೆ ಜಾನುವಾರುಗಳಿಗೆ ಮೇವಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ರೈತರು ಅಳಲು ತೋಡಿಕೊಂಡರು.

ಮಠದ ಗೋಶಾಲೆಗೆ ಕೇಂದ್ರ ತಂಡ ಭೇಟಿ

ಬರ ಅಧ್ಯಯನ ಮಾಡಲು ಬಂದ ಕೇಂದ್ರ ತಂಡಕ್ಕೆ ಜಿಲ್ಲಾಡಳಿತ ಮೇವಿಲ್ಲದೆ ಬಳಲಿದ ದನ ಕರುಗಳನ್ನು ತೋರಿಸಬೇಕಿತ್ತು. ಆದರೆ ಕನಕಗಿರಿ ಜೈ‌ನ ಮಠದ ಗೋಶಾಲೆಯಲ್ಲಿರುವ ದಷ್ಟಪುಪ್ಟವಾದ ಗಿರ್ ತಳಿಯ ಹಸು, ಎಮ್ಮೆಗಳನ್ನು ತೋರಿಸಲಾಯಿತು. ಜಿಲ್ಲಾದ್ಯಂತ ಬರ ಘೋಷಣೆ ಮಾಡಲಾಗಿದ್ದರೂ ಇದುವರಗೆ ಸರ್ಕಾರದ ವತಿಯಿಂದ ಗೋ ಶಾಲೆ ತೆರೆದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನಪುಡಿ ಕಲಬೆರಕೆ ಪ್ರಕರ: ಸಿಬಿಐಗೆ ವಹಿಸಲು ಆಗ್ರಹಿಸಿ ಪ್ರತಿಭಟನೆ
ಮನ್ಮುಲ್ ಅಕ್ರಮಗಳ ಕುರಿತು ತನಿಖೆಗೆ ಮಾಜಿ ಅಧ್ಯಕ್ಷ ಆಗ್ರಹ