ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಎಸ್‌ಎಲ್‌ಬಿಸಿ ಸಭೆಯಲ್ಲಿ ಬರ ಪೀಡಿತ ತಾಲೂಕುಗಳ ರೈತರ ನೆರವಿಗಾಗಿ ಕೆಲ ಪರಿಹಾರ ಯೋಜನೆಗಳನ್ನು ಘೋಷಿಸಲಾಯಿತು.
ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಅದರಲ್ಲಿ 89 ತಾಲೂಕುಗಳು ತೀವ್ರ ಬರ ಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಸಾಮಾನ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿ ಇತರ ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ತಾತ್ಕಾಲಿಕ ತಡೆ ನೀಡಲಾಗುತ್ತದೆ. ಸಾಧಾರಣ ಬರ ಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಕೇವಲ ಹಳೇ ಸಾಲ ಮರುಪಾವತಿ ಮುಂದೂಡುವುದು ಮಾತ್ರವಲ್ಲದೆ, ರೈತರ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ನಿಯಮಗಳಂತೆ ಹೊಸ ಸಾಲಗಳನ್ನು ವಿತರಿಸಲಿವೆ. ಈ ಪರಿಹಾರ ಯೋಜನೆಗಳು ಆ. 11ರೊಳಗೆ ಜಾರಿಗೊಳಿಸಲಾಗುತ್ತದೆ. ಇದರ ಜತೆಗೆ ಸರ್ಕಾರ ಮುಂದೆ ಹೊಸದಾಗಿ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದರೆ ಆ ತಾಲೂಕುಗಳಿಗೂ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡಬಾರದು. ಆ ಮೂಲಕ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತರಬೇಕು. ಬಲವಂತದ ವಸೂಲಾತಿ ಕುರಿತು ರೈತರಿಂದ ದೂರುಗಳು ಬಂದರೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಸಹಕಾರ ಬ್ಯಾಂಕ್‌ಗಳ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವ ಸಂಬಂಧ ನಬಾರ್ಡ್ ಹಾಗೂ ರಾಜ್ಯ ಸರ್ಕಾರದ ಹಂತದಲ್ಲಿ ಚರ್ಚಿಸಿ ಶೀಘ್ರ ಸೂಕ್ತ ಪರಿಹಾರ ರೂಪಿಸುವುದಾಗಿ ಮುಖ್ಯ ಕಾರ್ಯದರ್ಶಿ ಅವರು ತಿಳಿಸಿದರು.