ಘೋಷಣೆಗಷ್ಟೇ ಸೀಮಿತವಾಯ್ತು ಬರ, ಪರಿಹಾರ ಯಾವಾಗ ?

KannadaprabhaNewsNetwork |  
Published : Nov 01, 2026, 03:45 AM IST
ಚಿತ್ರ 1)- 31ಎಚ್‌ ಆರ್‌ ಪಿ 2 - ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿ ಒಣಗಿ ನಿಂತಿರುವ ರಾಗಿ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸುತ್ತಿರುವುದು.2)- 31ಎಚ್‌ ಆರ್‌ ಪಿ 3 - ಗುಡಿಹಳ್ಳಿ ಹಾಲೇಶ, ಕಿಸಾನ್ ಸಭಾ ಜಿಲ್ಲಾದ್ಯಕ್ಷ (ಕೋಟ್ ಗೆ)3)-31ಎಚ್‌ ಆರ್‌ ಪಿ 4 - ಮಂಜನಾಯ್ಕ ಎಇಇ ಕುಡಿಯುವ ನೀರ ಇಲಾಖೆ.(ಕೋಟ್ ಗೆ )4)-31ಎಚ್‌ ಆರ್‌ ಪಿ 5 - ವೈ.ಎಚ್.ಚಂದ್ರಶೇಖರ ಇಒ ತಾ.ಪಂ(ಕೋಟ್ ಗೆ )    | Kannada Prabha

ಸಾರಾಂಶ

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೇವಲ 40 ಖಾಸಗಿ ಕೊಳವೆಬಾವಿಗಳ ನೀರನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ

ಬಿ. ರಾಮಪ್ರಸಾದ್‌ ಗಾಂಧಿ ಹರಪನಹಳ್ಳಿ

ಡಾ. ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ಸಹ ಒಂದಾಗಿರುವ ಹಿನ್ನೆಲೆ ಮೊದಲ ಪಟ್ಟಿಯಲ್ಲಿಯೇ ಬರ ಪೀಡಿತ ತಾಲೂಕು ಎಂದು ಹರಪನಹಳ್ಳಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತು.

ಇದರಿಂದ ಮುಂಗಾರು ಮಳೆ ಕೈಕೊಟ್ಟು ಕಷ್ಟದ ಸ್ಥಿತಿಯಲ್ಲಿದ್ದ ರೈತರು ಸರ್ಕಾರ ನಮ್ಮ ಕಷ್ಟಕ್ಕೆ ನೆರವಾಗಬಹುದು ಎಂಬ ಸಣ್ಣ ಆಸೆ ಹೊಂದಿದ್ದರು. ಆದರೆ ಬರ ಘೋಷಣೆಯಾಗಿ 2 ತಿಂಗಳಾದರೂ ಈವರೆಗೂ ಬರ ಪರಿಹಾರ ರೈತರ ಖಾತೆಗಳಿಗೆ ಜಮಾ ಆಗಿಲ್ಲ.

ಈ ವರ್ಷ 89,7184 ಹೆ. ಬಿತ್ತನೆಯಾಗಿದೆ, ಅದರಲ್ಲಿ 84,730 ಹೆ ಬೆಳೆ ಹಾನಿ ಸಂಭವಿಸಿದೆ. ಅಂದರೆ ಅಂದಾಜು 66.52 ಕೋಟಿ ನಷ್ಟ ಸಂಭವಿಸಿದೆ, ಪರಿಹಾರ ಹೋಗಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ, ತಾಲೂಕಿನ 78 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಜಾನುವಾರುಗಳಿಗೆ ಮೇವಿಲ್ಲ, ಊರ ಹೊರಗೆ ಹೋದರೆ ಒಣಗಿ ನಿಂತಿರುವ ಬೆಳೆ, ಒಟ್ಟಿನಲ್ಲಿ ಬರದಿಂದ ಜನ ಜಾನುವಾರು ತತ್ತರಿಸಿದ್ದು, ಸರ್ಕಾರ ಸಾಂತ್ವನ ಹೇಳಲು ಈವರೆಗೂ ವಿಫಲವಾಗಿದೆ.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೇವಲ 40 ಖಾಸಗಿ ಕೊಳವೆಬಾವಿಗಳ ನೀರನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ, ಇನ್ನೂ 78 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಕೇವಲ 12 ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ವಿಬಿಜಿ ರಾಮ ಜಿ ಯೋಜನೆಯಲ್ಲಿ ಈಗಿರುವ ಪ್ರಕಾರ 125 ಮಾನವ ದಿನಗಳನ್ನು ಕೂಲಿ ಕೆಲಸ ಕೊಡಲಾಗುತ್ತಿದೆ, ಬರ ಇರುವುದರಿಂದ ಈ ದಿನ ಹೆಚ್ಚಿಸ ಬಹುದು ಎಂಬುದು ಕೂಲಿಕಾರರ ಅನಿಸಿಕೆಯಾಗಿದೆ. ಈ ಯೋಜನೆಯಲ್ಲಿ ಕೂಲಿ ಕೆಲಸ ಮಾಡಿದ ಕೂಲಿಕಾರರಿಗೆ ಕಳೆದ 4 ವಾರಗಳಿಂದ ಕೂಲಿ ಹಣ ಬಂದಿಲ್ಲ. ಬರ ಪರಿಹಾರ ₹2500 ಎಂದು ಘೋಷಣೆ ಮಾಡಿದರೂ ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ.

ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿ ಅನೇಕ ದಿನ ಕಳೆದಿವೆ, ವಿಜಯದಶಮಿ ಮುಗಿಯಿತು, ಇನ್ನೂ ದೀಪಾವಳಿ ಬರುತ್ತದೆ ಹೀಗೆ ಹಬ್ಬಗಳು ಬರುತ್ತಲಿವೆ, ಮಾರುಕಟ್ಟೆಯಲ್ಲಿ ದಿನಸಿ ಸೇರಿದಂತೆ ಎಲ್ಲ ಬೆಲೆಗಳು ಗಗನಕ್ಕೇರಿವೆ, ರೈತರು ಸೇರಿದಂತೆ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತ್ವರಿತವಾಗಿ ರೈತರ, ಬಡವರ ನೆರವಿಗೆ ಬರಬೇಕು, ಒಬ್ಬರಿಗೊಬ್ಬರು ಆರೋಪ ಮಾಡುವುದು ಬಿಟ್ಟು ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ಒಕ್ಕೋರಲಿನ ಆಗ್ರಹವಾಗಿದೆ, ಕಾದು ನೋಡಬೇಕಿದೆ.

78 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, 40 ಖಾಸಗಿ ಬೋರವೇಲ್‌ಗಳಿಂದ ನೀರು ಪಡೆದು ಕುಡಿಯಲು ಸರಬರಾಜು ಮಾಡುತ್ತಿದ್ದೇವೆ, ಅನೇಕರು ನಮಗೆ ಬೇಕು ಎಂದು ನೀರನ್ನು ಬಾಡಿಗೆಗೆ ಕೊಡುತ್ತಾ ಇಲ್ಲ, ಹೊಸ ಬೋರವೇಲ್‌ ಕೊರೆಸಲು ಅನುಮತಿ ಇಲ್ಲ, ಇರುವ ನೀರಿನಲ್ಲಿಯೇ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹರಪನಹಳ್ಳಿ ಎಇಇ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಮಂಜನಾಯ್ಕ ತಿಳಿಸಿದ್ದಾರೆ.

ಬರ ಕಾಮಗಾರಿ ಆರಂಭಗೊಂಡಿಲ್ಲ, ಪರಿಹಾರ ₹2500 ಬಂದಿಲ್ಲ, ಮೇವಿನ ಕೊರತೆ ಇದೆ, ಫಸಲ ಭೀಮಾ ಯೋಜನೆ ನೈಜ ರೈತರಿಗೆ ಸಿಗುತ್ತಿಲ್ಲ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ನನೆಗುದಿಗೆ ಬಿದ್ದಿವೆ. ಒಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ನಿರ್ವಹಣೆಯಲ್ಲಿ ವಿಫಲಗೊಂಡಿವೆ ಎಂದು ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ ತಿಳಿಸಿದ್ದಾರೆ.

ಬರ ಇರುವುದರಿಂದ ವಿಬಿಜಿ ರಾಮ ಜೀ ಯೋಜನೆಯಲ್ಲಿ ಈಗಿರುವ 125 ಮಾನವ ದಿನ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ, ಮಂಜೂರಾತಿ ದೊರಕುವ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹರಪನಹಳ್ಳಿ ಇಒ ತಾಪಂ ವೈ.ಎಚ್. ಚಂದ್ರಶೇಖರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ