ರಾಮಕೃಷ್ಣ ದಾಸರಿ
ಜಿಲ್ಲೆಯ ನಗರ, ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಬರದ ಸನ್ನಿವೇಶವು ದಿನೇ ದಿನೇ ತೀವ್ರ ಸ್ವರೂಪವನ್ನು ತಾಳುತ್ತಿದೆ. ಜಿಲ್ಲೆಯ ಎಂಟು ತಾಲೂಕುಗಳ ಪೈಕಿ ರಾಯಚೂರು ಮತ್ತು ಲಿಂಗಸುಗೂರು ತಾಲೂಕುಗಳನ್ನು ಮಧ್ಯಮ ಅದೇ ರೀತಿ ಸಿಂಧನೂರು, ಮಾನ್ವಿ, ಸಿರವಾರ, ಮಸ್ಕಿ, ದೇವದುರ್ಗ ಮತ್ತು ಅರಕೇರಾ ತಾಲೂಕುಗಳಲ್ಲಿ ತೀವ್ರ ಬರ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಇಲ್ಲಿವರೆಗೂ ಬರ ಪರಿಹಾರಕ್ಕೆ ಸಂಬಂಧಿಸಿದ ಕೆಲಸಗಳು ಪರಿಣಾಮಕಾರಿಯಾಗಿ ಜಾರಿ ಕಂಡಿಲ್ಲ.
ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆಯು ಬಿಗಡಾಯಿಸುತ್ತಿದೆ, ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ರೈತರು ಪರದಾಡುತ್ತಿದ್ದು, ಕೆಳಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಸಿಗದಕ್ಕೆ ಬೆಳೆಗಳು ಒಣಗಲಾರಂಭಿಸಿದ್ದು, ಕೆಳಭಾಗದಲ್ಲಿ ಕಾಲುವೆ ಅಲವಂಭಿತ ಗ್ರಾಮಗಳಲ್ಲಿ ಕುಡಿಯಲು ನೀರು ಸಹ ಸಿಗದಂತಾಗುತ್ತಿದೆ. ಇನ್ನು ಬೋರ್ ವೆಲ್ ಅಲವಂಭಿತ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಪಂಪ್ಸೆಟ್ಗಳಿಗೆ ಅಗತ್ಯವಾದ ವಿದ್ಯುತ್ ಇಲ್ಲದಕ್ಕೆ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದ್ದು, ನದಿ ಮೂಲಗಳು, ಹಳ್ಳ-ಕೊಳ್ಳಗಳು, ಕೆರೆ, ಭಾವಿಗಳು ಒಣಗುತ್ತಿದ್ದು, ಅಂತರ್ಜಲ ಬರಡಾಗುತ್ತಿದ್ದು, ಕೆಲಸಕ್ಕಾಗಿ ಗ್ರಾಮಗಳಲ್ಲಿ ಜನ ಗುಳೆಯ ಹಾದಿಯನ್ನಿಡಿದಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವು ಒದಗಿಸುವುದು, ಮೇವು ಸಂಗ್ರಹ ಹಾಗೂ ಮೇವು ಕಿಟ್ಗಳ ವಿತರಣೆ ಕಾರ್ಯಗಳು ಮೂಲೆ ಸೇರಿವೆ.ಹೋರಾಟದ ಅಸ್ತ್ರಕ್ಕೆ ಸಿಗದ ಬೆಲೆ: ಬರ ಸನ್ನಿವೇಶದಲ್ಲಿ ಕುಡಿಯುವ ನೀರು, ಬೆಳೆಗಳಿಗೆ ನೀರು, ವಿದ್ಯುತ್ ಸರಬರಾಜು ಹಾಗೂ ಬರ ಪರಿಹಾರಕ್ಕಾಗಿ ಜನಸಾಮಾನ್ಯರು ಹೋರಾಟದ ಅಸ್ತ್ರವನ್ನು ಉಪಯೋಗಿಸುತ್ತಿದ್ದರು, ಸಂಬಂಧಿಸಿದ ಜಿಲ್ಲಾಡಳಿತ, ತಾಲೂಕಾಡಳಿತ, ಗ್ರಾಪಂ, ನೀರಾವರಿ ಹಾಗೂ ಜೆಸ್ಕಾಂ ಇಲಾಖೆಗಳು ಸ್ಪಂದಿಸದ ಕಾರಣಕ್ಕೆ ಹೋರಾಟದ ಅಸ್ತ್ರಕ್ಕೆ ಯಾವುದೇ ರೀತಿಯ ಬೆಲೆ ಸಿಗದಂತಾಗಿದೆ. ಟಿಎಲ್ಬಿಸಿ-ಎನ್ಆರ್ಬಿಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಮೇಲ್ಭಾಗದ ಹಾಗೂ ಕೆಳಭಾಗದ ರೈತರು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಗ್ರಾಮಗಳಿಗೆ ನೀರು ನೀಡುವಂತೆ ಹಳ್ಳಿಗಳಲ್ಲಿ ಪ್ರತಿಭಟನೆಗಳು ಶುರುವಾಗಿದ್ದು, 12 ತಾಸು ವಿದ್ಯುತ್ ನೀಡುವಂತೆ ರೈತರು ಜೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಬರ ಘೊಷಣೆಗೊಂಡು ತಿಂಗಳು ಗತಿಸುತ್ತಿದ್ದರು ಸಹ ಪರಿಹಾರ ಕ್ರಮಗಳು ಜಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರದಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 2,81,345.90 ಹೆಕ್ಟರ್ ನಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 2,80,665 ಹೆಕ್ಟೇರ್ ಕೃಷಿ, 680 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿವೆ. ಕೃಷಿ ವಲಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ 1,80,398 ಹೆಕ್ಟೇರ್, ಭತ್ತ 11,366, ತೊಗರಿ 67,816. ಸಜ್ಜೆ 4,789 ಹೆಕ್ಟೇರ್ ಪ್ರದೇಶದಲ್ಲಿ ಅದೇ ರೀತಿ ತೋಟಗಾರಿಕೆಯಲ್ಲಿ ಕ್ರಮವಾಗಿ ಮೆಣಸಿನಕಾಯಿ 505, ಈರುಳ್ಳಿ 131 ಹೆಕ್ಟೇರ್ ಪ್ರದೇಶದಲ್ಲಿ ಬರಕ್ಕೆ ಬಲಿಯಾಗಿದೆ. ಒಟ್ಟಾರೆ 280 ಕೋಟಿ ರು. ಬೆಳೆ ನಷ್ಟವನ್ನು ಅಂದಾಜಿಸಿರುವ ಜಿಲ್ಲಾಡಳಿತವು ವಿಸೃತ ಬೆಳೆ ಹಾನಿಯ ವರದಿಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದೆ.
--------
-ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ