ರಾಯಚೂರು: ಬರ ಹೋಯ್ತು ನೆರೆ ಬಂತು...!

KannadaprabhaNewsNetwork | Published : Jul 28, 2024 2:03 AM

ಸಾರಾಂಶ

ಕಳೆದ ವರ್ಷ ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ಜನತೆ ಈ ಬಾರಿ ನೆರೆ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ-ತುಂಗಭದ್ರಾ ನದಿ ಪಾತ್ರದಲ್ಲಿ ನೆರೆ ಸನ್ನಿವೇಶ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಜನರಿಗೆ ಕಟ್ಟೆಚ್ಚರ ನೀಡಲಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕಳೆದ ವರ್ಷ ಮಳೆ ಕೊರತೆ, ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಗಿದ್ದ ಜಿಲ್ಲೆಯ ಜನರಿಗೆ ಪ್ರಸಕ್ತ ಸಾಲಿನಲ್ಲಿ ನೆರೆ ಸನ್ನಿವೇಶವನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಜೊತೆಗೆ ಮಹಾರಾಷ್ಟ್ರ, ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಿಗೆ ಲಕ್ಷಾಂತರ ಕ್ಯುಸೆಕ್‌ ನೀರು ಹರಿಸುತ್ತಿರುವುದರಿಂದ ಜಿಲ್ಲೆ ವ್ಯಾಪ್ತಿಗೆ ಬರುವ ಉಭಯ ನದಿಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅತಿವೃಷ್ಟಿಯ ವಾತಾವರಣ ನಿರ್ಮಾಣಗೊಂಡಿದೆ.

ನೆರೆಯ ಹಿನ್ನೋಟ:

2019ರಲ್ಲಿ ಜಿಲ್ಲೆಯಲ್ಲಿ ಸೃಷ್ಟಿಗೊಂಡಿದ್ದ ಅತಿವೃಷ್ಟಿಯಲ್ಲಿ ಕೃಷ್ಣಾ ನದಿಗೆ 9 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹರಿಸಲಾಗಿತ್ತು. ಅದೇ ರೀತಿ ತುಂಗಭದ್ರಾ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಹರಿದು ಬಿಡಲಾಗಿತ್ತು. 2020ರಲ್ಲಿ ಸಹ ಕೃಷ್ಣಾ ನದಿಗೆ ಸರಿಸುಮಾರು 6 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ನೆರೆಯಿಂದಾಗಿ 40 ಕೋಟಿ ಹಾನಿಯಾಗಿತ್ತು. ಇಷ್ಟೇ ಅಲ್ಲದೇ 12 ಜನರು ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿದ್ದರು. 2021ರಲ್ಲಿ ಕೃಷ್ಣಾ ನದಿಗೆ 4.50 ಲಕ್ಷ ಕ್ಯುಸೆಕ್ ನೀರು ಹರಿಸಿದ್ದರಿಂದ ಸಾವಿರಾರು ಎಕರೆಯಲ್ಲಿ ಬೆಳೆ ನಷ್ಟ ಉಂಟಾಗಿತ್ತು. 2023ರಲ್ಲಿ ಮಳೆ ಕೊರತೆಯಿಂದಾಗಿ ಬರವನ್ನು ಎದುರಿಸಿದ ಜಿಲ್ಲೆಯು ಪ್ರಸಕ್ತ ಸಾಲಿನಲ್ಲಿ ಮತ್ತೆ ನೆರೆಯ ಸಂಕಷ್ಟವನ್ನು ನೋಡುತಿದೆ.

ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ, ಬಸವಸಾಗರ ಜಲಾಶಯಗಳು ಭರ್ತಿಯಾಗಿದ್ದರಿಂದ ಕೃಷ್ಣಾ ನದಿಗೆ ಇಲ್ಲಿ ತನಕ 3 ಲಕ್ಷಕ್ಕು ಹೆಚ್ಚಿನ ಪ್ರಮಾಣದ ಕ್ಯುಸೆಕ್‌ ನೀರನ್ನು ನದಿಗೆ ಹರಿಸುತ್ತಿದ್ದು ಇದರಿಂದಾಗಿ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ, ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಗಳು ಮುಳುಗಡೆಯಾಗಿವೆ. ಲಿಂಗಸುಗೂರಿನ ನಡುಗಡ್ಡೆ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಇನ್ನು ಐತಿಹಾಸಿಕ ದೇವಸ್ಥಾನಗಳು ಮುಳುಗಡೆಯಾಗಿದ್ದು, ನದಿ ಸಮೀಪದ ಜಮೀನುಗಳಲ್ಲಿ ಬೆಳೆದ ಬೆಳೆಗಳು ಹಾಗೂ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ.

ತುಂಗಭದ್ರಾ ಜಲಾಶಯವು ಭರ್ತಿಯಾಗಿದ್ದರಿಂದ ನದಿಗೆ 1 ರಿಂದ 1.5 ಲಕ್ಷ ಕ್ಯುಸೆಕ್‌ ನೀರು ಹರಿಸುತ್ತಿದ್ದು ಜಿಲ್ಲೆ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕುಗಳ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಸನ್ನಿವೇಶವು ಮೂಡಿದೆ.

ಜಿಲ್ಲಾಡಳಿತದಿಂದ ಕಟ್ಟೆಚ್ಚರ: ಉಭಯ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ನೆರೆ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತದಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಅಗತ್ಯ ಕಟ್ಟೆಚ್ಚರ ವಹಿಸಲಾಗಿದೆ. ನಡುಗಡ್ಡೆಗಳಲ್ಲಿನ ಜನರಿಗೆ ಈಗಾಗಲೇ ಔಷಧ ಹಾಗೂ ಆಹಾರ ವಿತರಿಸಲಾಗಿದೆ. ಜನ ಹಾಗೂ ಜಾನುವಾರುಗಳ ನದಿ ಸಮೀಪಕ್ಕೆ ತೆರಳದಂತೆ ಸೂಚನೆ ನೀಡಿದ್ದು, ಲಿಂಗಸುಗೂರು ಮತ್ತು ದೇವದುರ್ಗ ತಾಲುಕುಗಳ ಬಾಧಿತ ಹಳ್ಳಿಗಳಲ್ಲಿ ನಿರಾಶ್ರಿತ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ. ಅತಿವೃಷ್ಟಿಯನ್ನು ನಿಭಾಯಿಸಲು ಪಕ್ಕದ ಆಂಧ್ರಪ್ರದೇಶ ರಾಜ್ಯದ ವಿಜಯವಾಡದ 10ನೇ ಬೆಟಾಲಿಯನ್‌ಗೆ ಸೇರಿದ ಕಮಾಂಡರ್ ಗೋಪಾಲ ಕೃಷ್ಣ ನೇತೃತ್ವದ 33 ಸಿಬ್ಬಂದಿಯನ್ನೊಳಗೊಂಡ ಎನ್‌ಡಿಆರ್‌ಎಫ್‌ ತಂಡವನ್ನು ಸಹ ನಿಯೋಜಿಸಲಾಗಿದೆ.

Share this article