ಕನ್ನಡಪ್ರಭ ವಾರ್ತೆ ಧಾರವಾಡ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಐದು ಜನ ಸದಸ್ಯರನ್ನೊಳಗೊಂಡಿದ್ದು, ಬಾಗಲಕೋಟ ಜಿಲ್ಲಾ ಪ್ರವಾಸದ ನಂತರ ಶನಿವಾರ ಮಧ್ಯಾಹ್ನ 3.30ಕ್ಕೆ ಧಾರವಾಡ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ತಂಡ ಹಾರೋಬೆಳವಡಿ ಮೂಲಕ ಜಿಲ್ಲೆಗೆ ಆಗಮಿಸುತ್ತಿದ್ದು, ಹಾರೋಬೆಳವಡಿ, ಅಮ್ಮಿನಭಾವಿ, ಮರೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿನ ವಿವಿಧ ರೈತರ ಜಮೀನುಗಳಲ್ಲಿ ಹತ್ತಿ, ಗೋವಿನಜೋಳ, ನೆಲಗಡಲೆ(ಶೇಂಗಾ), ಈರುಳ್ಳಿ, ಮೆಣಸಿನಕಾಯಿ, ಸೋಯಾಬಿನ್ ಬೆಳೆಗಳ ಹಾನಿ ಪರಿಶೀಲನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನರೇಗಾ ಯೋಜನೆಯ ಕಾರ್ಯಗಳನ್ನು ಸಹ ತಂಡ ವೀಕ್ಷಿಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ತಂಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ, ಬಿತ್ತನೆ ಆಗದಿರುವ ಬಗ್ಗೆ, ಹಲವು ಕಡೆ ಸಂಪೂರ್ಣ ಬೆಳೆ ಹಾನಿ, ಕೆಲವೆಡೆ ಬೆಳೆ ಇದ್ದರೂ ಉಂಟಾಗಲಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ತಂಡಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.