ಕನಕಗಿರಿ, ಕುಷ್ಟಗಿಗೆ ಬರ ಅಧ್ಯಯನ ತಂಡ ಭೇಟಿ

KannadaprabhaNewsNetwork |  
Published : Oct 06, 2026, 02:00 AM IST
ಕುಷ್ಟಗಿ ಪಟ್ಟಣದ ಸರ್ಕ್ಯೂಟ್‌ ಹೌಸ್‌ನಲ್ಲಿ ಬೆಳೆ ಮಾದರಿ ಪರಿಶೀಲನೆಗಾಗಿ ಬಂದಿರುವ ಕೇಂದ್ರ ಅಧ್ಯಯನ ತಂಡದವರೊಂದಿಗೆ ರೈತ ಮುಖಂಡರು ಚರ್ಚಿಸಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ಬರಪೀಡಿತ ಕುಷ್ಟಗಿ ಹಾಗೂ ಕನಕಗಿರಿ ತಾಲೂಕುಗಳ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡವು ರೈತರ ಜಮೀನುಗಳಿಗೆ ತೆರಳಿ ಬೆಳೆಹಾನಿಯನ್ನು ಖುದ್ದು ಪರಿಶೀಲಿಸಿತು.

ಕುಷ್ಟಗಿ, ಕನಕಗಿರಿ: ಮಳೆ ಕೊರತೆಯಿಂದ ಭೀಕರ ಬರ ಎದುರಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಪರಿಹಾರ ಯಾವುದಕ್ಕೂ ಸಾಲದು. ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ಎರಡು ಬಾರಿ ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಎರಡೂ ಬಿತ್ತನೆಗಳಿಗೆ ಪ್ರತ್ಯೇಕ ಪರಿಹಾರ ನೀಡಬೇಕು ಎಂದು ರೈತರು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಅಳಲು ತೋಡಿಕೊಂಡರು.

ಕೊಪ್ಪಳ ಜಿಲ್ಲೆಯ ಬರಪೀಡಿತ ಕುಷ್ಟಗಿ ಹಾಗೂ ಕನಕಗಿರಿ ತಾಲೂಕುಗಳ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡವು ರೈತರ ಜಮೀನುಗಳಿಗೆ ತೆರಳಿ ಬೆಳೆಹಾನಿಯನ್ನು ಖುದ್ದು ಪರಿಶೀಲಿಸಿತು. ಕೇಂದ್ರ ಸರ್ಕಾರದ ನಿರ್ದೇಶಕ ಡಾ. ಮನ್ ಸಿಂಗ್ ನೇತೃತ್ವದಲ್ಲಿ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ರಾಕೇಶ್ ಕುಮಾರ್ ಅವರನ್ನೊಳಗೊಂಡ ತಂಡ ಹನುಮನಾಳ, ತಿಪ್ಪನಾಳ, ಸೂಳೇಕಲ್, ಬೆನಕನಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆಯಿತು.

ತಾಲೂಕುಗಳಲ್ಲಿ ತೊಗರಿ, ಮೆಕ್ಕೆಜೋಳ, ಸಜ್ಜೆ, ಹುರುಳಿ, ಅವರೆ, ಹತ್ತಿ, ಸೂರ್ಯಕಾಂತಿ, ಔಡಲ ಹಾಗೂ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಸುರಿದ ಮಳೆಯನ್ನು ನಂಬಿ ಬಿತ್ತನೆ ಮಾಡಿದ ಬಳಿಕ ವಾಡಿಕೆ ಮಳೆ ಬಾರದ ಪರಿಣಾಮ ಗಿಡಗಳು ಬೆಳೆದರೂ ಕಾಳು ಕಟ್ಟದೆ ಒಣಗಿ ಹೋಗಿವೆ. ಮೊದಲ ಬಿತ್ತನೆ ಹಾಳಾದ ಬಳಿಕ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಅನೇಕ ರೈತರು ಎರಡನೇ ಬಾರಿ ಬಿತ್ತನೆ ಮಾಡಿದ್ದು, ಅದೂ ಕೈಕೊಟ್ಟಿದೆ. ಬೀಜ, ಗೊಬ್ಬರ ಹಾಗೂ ಕೂಲಿ ಸೇರಿದಂತೆ ಎರಡು ಬಾರಿ ಮಾಡಿದ ಖರ್ಚು ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂದು ರೈತ ಮುಖಂಡರು ವಿವರಿಸಿದರು.

ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳೆ ಮಾದರಿಗಳನ್ನು ಪರಿಶೀಲಿಸಿದ ಬಳಿಕ ರೈತರೊಂದಿಗೆ ಕೇಂದ್ರ ತಂಡ ಸಂವಾದ ನಡೆಸಿತು. ಈ ವೇಳೆ ರೈತ ಮುಖಂಡರಾದ ನಜೀರಸಾಬ ಮೂಲಿಮನಿ, ಬಸವರಾಜ ಗಾಣಿಗೇರ, ಕಿರಣಜ್ಯೋತಿ, ಮಲ್ಲಿಕಾರ್ಜುನ ದೋಟಿಹಾಳ, ಹನುಮೇಶ ನಾಯಕ ಸೇರಿದಂತೆ ಹಲವರು ಬರದ ತೀವ್ರತೆ ಹಾಗೂ ರೈತರ ಸಂಕಷ್ಟವನ್ನು ವಿವರಿಸಿದರು.

ಕನಕಗಿರಿ ತಾಲೂಕಿನ ಹನುಮನಾಳದಲ್ಲಿ ರೈತ ಬಸವರಾಜ ಅವರ ಜಮೀನಿನಲ್ಲಿನ ಹಾನಿಗೀಡಾದ ತೊಗರಿ ಹಾಗೂ ಮೂಕಪ್ಪ ಅವರ ಸಜ್ಜೆ ಬೆಳೆಯನ್ನು ತಂಡ ಪರಿಶೀಲಿಸಿತು. ತಿಪ್ಪನಾಳದಲ್ಲಿ ಯಮನೂರಪ್ಪ ಅವರ ಕೃಷಿಹೊಂಡ ವೀಕ್ಷಿಸಿತು. ನಂತರ ಸೂಳೇಕಲ್‌ನಲ್ಲಿ ಸಂಗಪ್ಪ ನೂತನಶೆಟ್ಟಿ ಅವರ ಒಣಗಿದ ಸೂರ್ಯಕಾಂತಿ, ಸಣ್ಣ ಕಾಶಿಂಸಾಬ ಅವರ ಮೆಕ್ಕೆಜೋಳ ಹಾಗೂ ಹುಸೇನಸಾಬ ಅವರ ಜಮೀನಿನಲ್ಲಿನ ಹಾನಿಗೀಡಾದ ಬೆಳೆಯನ್ನು ಪರಿಶೀಲಿಸಿತು.

ಮೇವು ಕೊಡಿ, ಇಲ್ಲವೇ ಗೋಶಾಲೆ ತೆರೆಯಿರಿ: ಮಳೆಗಾಲದಲ್ಲಿಯೇ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದ್ದು, ಕೂಡಲೇ ಮೇವು ಪೂರೈಸಬೇಕು. ಇಲ್ಲವೇ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಆರಂಭಿಸಬೇಕು. ಇಲ್ಲದಿದ್ದರೆ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ ಎಂದು ರೈತ ಲಕ್ಷ್ಮಣ ವಡಕಿ ಅಳಲು ತೋಡಿಕೊಂಡರು.

ರೈತ ಮುಖಂಡ ಹನುಮೇಶ ಪೂಜಾರಿ, ಭೀಕರ ಬರದಿಂದ ರೈತರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಮಧ್ಯಂತರ ಬೆಳೆ ವಿಮಾ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಆರಂಭಿಸಬೇಕು. ರೈತರ ಸಾಲಮನ್ನಾ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

₹279 ಕೋಟಿ ಪರಿಹಾರಕ್ಕೆ ಬೇಡಿಕೆ: ಜಿಲ್ಲೆಯಲ್ಲಿ ಉಂಟಾಗಿರುವ ಬೆಳೆಹಾನಿ, ಕುಡಿಯುವ ನೀರು, ಉದ್ಯೋಗ ಹಾಗೂ ಕಾಮಗಾರಿಗಳ ಸ್ಥಿತಿಗತಿ ಕುರಿತು ಕೇಂದ್ರ ತಂಡಕ್ಕೆ ಸಮಗ್ರ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 3.02 ಲಕ್ಷ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗಿವೆ. ಎನ್‌ಡಿಆರ್‌ಎಫ್ ನಿಯಮಾವಳಿಗಳಡಿ ಬೆಳೆಹಾನಿ ಪರಿಹಾರ ಸೇರಿದಂತೆ ಬರ ನಿರ್ವಹಣೆಗೆ ₹279 ಕೋಟಿ ಅಗತ್ಯವಿದೆ ಎಂದು ಕೇಂದ್ರ ತಂಡಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.

ಜಿಲ್ಲೆಯಲ್ಲಿ ಸುಮಾರು 12.70 ಲಕ್ಷ ಕುರಿ–ಮೇಕೆಗಳು ಹಾಗೂ 2.39 ಲಕ್ಷ ಜಾನುವಾರುಗಳಿವೆ. ಸದ್ಯ ಲಭ್ಯವಿರುವ ಮೇವಿನ ಪ್ರಮಾಣದ ಬಗ್ಗೆಯೂ ತಂಡಕ್ಕೆ ಮಾಹಿತಿ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಗೋಶಾಲೆ ಆರಂಭಿಸುವುದು, ಮೇವಿನ ಬ್ಯಾಂಕ್ ಸ್ಥಾಪಿಸುವುದು ಹಾಗೂ ಮೇವಿನ ಮಿನಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 15,838 ಮೇವಿನ ಮಿನಿ ಕಿಟ್‌ಗಳು ಮಂಜೂರಾಗಿದ್ದು, ಪೂರೈಕೆ ಆರಂಭವಾಗಿದೆ ಎಂದು ತಿಳಿಸಿದರು.

ಬರದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಹಣ ಪಾವತಿಸುವುದು ಹಾಗೂ ರೈತರ ಸಾಲ ಮರುಪಾವತಿಗೆ ಬ್ಯಾಂಕ್‌ಗಳಿಂದ ನೋಟಿಸ್ ನೀಡದಂತೆ ಕ್ರಮವಹಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ವರದಿ ಸಲ್ಲಿಕೆ: ರೈತರ ಸಮಸ್ಯೆಗಳನ್ನು ಆಲಿಸಿರುವ ಕೇಂದ್ರ ತಂಡವು ವಿವಿಧೆಡೆ ನಡೆಸಿದ ಪರಿಶೀಲನೆ ಹಾಗೂ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ರೈತರಿಗೆ ಅನುಕೂಲವಾಗುವಂತೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಂಡದ ಅಧಿಕಾರಿಗಳು ಭರವಸೆ ನೀಡಿದರು.

ಸಂಜೆಯ ವೇಳೆಗೆ ಸೂಳೇಕಲ್ ಗ್ರಾಮದ ಬಳಿ ಪರಿಶೀಲನೆ ನಡೆಸುತ್ತಿದ್ದಾಗ ಕತ್ತಲು ಆವರಿಸಿದ್ದರಿಂದ ಟಿವಿ ಕ್ಯಾಮರಾ ಬೆಳಕಿನಲ್ಲಿಯೇ ಬರ ಪರಿಸ್ಥಿತಿಯ ಅಧ್ಯಯನ ಮುಂದುವರಿಯಿತು. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕೂಡ ಟಿವಿ ಕ್ಯಾಮರಾ ಬೆಳಕಿನಲ್ಲಿಯೇ ಕೇಂದ್ರ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿಯ ಮಾಹಿತಿ ನೀಡಿದರು.

ಈ ವೇಳೆ ಜಿಪಂ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ತಹಶೀಲ್ದಾರ್ ಚಂದ್ರಶೇಖರ ಗಾಳಿ, ತಾಪಂ ಇಒ ಕೆ. ರಾಜಶೇಖರ, ಸಹಾಯಕ ಕೃಷಿ ನಿರ್ದೇಶಕಿ ಡಾ. ಅಭಿಲಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡವಾಡದಲ್ಲಿ ರಸ್ತೆ ಹದಗೆಟ್ಟು ಸಂಚಾರ ದುಸ್ತರ
ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ವಂಚನೆ: ಆರೋಪ