ರಾಜ್ಯದಲ್ಲಿ 100 ವರ್ಷದಲ್ಲೇ ಕಾಣದ ಬರಗಾಲ: ಡಿಸಿಎಂ ಡಾ.ಜಿ.ಪರಮೇಶ್ವರ್

KannadaprabhaNewsNetwork |  
Published : Sep 03, 2026, 02:00 AM IST
 ರಾಜ್ಯದಲ್ಲಿ ಕಳೆದ 100 ವರ್ಷಗಳಲ್ಲೇ ಕಾಣದಂತಹ ತೀವ್ರ ಬರಗಾಲ ಎದುರಾಗಿದೆ.  | Kannada Prabha

ಸಾರಾಂಶ

ರಾಜ್ಯದಲ್ಲಿ ಕಳೆದ 100 ವರ್ಷಗಳಲ್ಲೇ ಕಾಣದಂತಹ ತೀವ್ರ ಬರಗಾಲ ಎದುರಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಜನ-ಜಾನುವಾರಿಗೆ ಸಂಕಷ್ಟ ಎದುರಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಜ್ಯದಲ್ಲಿ ಕಳೆದ 100 ವರ್ಷಗಳಲ್ಲೇ ಕಾಣದಂತಹ ತೀವ್ರ ಬರಗಾಲ ಎದುರಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಜನ-ಜಾನುವಾರಿಗೆ ಸಂಕಷ್ಟ ಎದುರಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಹಳ ದಿನಗಳ ನಂತರ ಹನೂರು ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಉಪಮುಖ್ಯಮಂತ್ರಿಯಾಗಿ ಇಡೀ ರಾಜ್ಯದಲ್ಲಿ ಬರಗಾಲದ ವೀಕ್ಷಣೆ ಮಾಡುತ್ತಿದ್ದೇನೆ. ನಿನ್ನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಹುಣಸೂರು ಭಾಗಕ್ಕೆ ಹೋಗಿದ್ದೆ. ಎಲ್ಲಿ ನೋಡಿದರೂ ಬೆಳೆಗಳು ಒಣಗಿ ನಾಶವಾಗಿವೆ. ಚಾಮರಾಜನಗರ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ ಎಂದರು.

ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಜನರಿಗೆ ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಒಂದು ರೀತಿಯಲ್ಲಿ ಹಾಹಾಕಾರ ಪ್ರಾರಂಭವಾಗಿದೆ. ಇನ್ನೂ 15 ದಿನ, ಒಂದು ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನ ಹರಿಸುತ್ತಿದೆ. ರೈತರಿಗೆ ಮತ್ತು ಜನರಿಗೆ ನೆರವಾಗಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

2028ರಲ್ಲಿ ನರೇಂದ್ರ ಅವರನ್ನು ಗೆಲ್ಲಿಸಲೇಬೇಕು:

ನಂತರ ಚುನಾವಣೆ ಬಗ್ಗೆ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕು, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಬರಲಿವೆ. ಪಕ್ಷವನ್ನು ಸಂಘಟಿಸಿ, ಚುನಾವಣೆಗೆ ತಯಾರಾಗಿ. 2028ರ ವಿಧಾನಸಭಾ ಚುನಾವಣೆಗೆ ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.

ರಾಜುಗೌಡರು ಗೌರವಯುತ ಕುಟುಂಬದಿಂದ ಬಂದವರು. ನಾನು ವೀರಪ್ಪ ಮೊಯ್ಲಿ ಸಂಪುಟದಲ್ಲಿ ಅವರ ತಂದೆಯವರ ಜತೆ ಸಚಿವನಾಗಿದ್ದೆ. ಕಳೆದ ಬಾರಿ ಅವರ ಮಗ ನರೇಂದ್ರ ಅವರನ್ನು ಗೆಲ್ಲಿಸಬೇಕು ಎಂದುಕೊಂಡಿದ್ದೆವು, ಆದರೆ ಕೆಲವು ಕಾರಣಗಳಿಂದ ಆಗಲಿಲ್ಲ. 2028ರಲ್ಲಿ ನರೇಂದ್ರ ಅವರನ್ನು ಗೆಲ್ಲಿಸಲೇಬೇಕು. ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ನರೇಂದ್ರ, ಕಳಲೆ ಕೇಶವಮೂರ್ತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮ, ಹಿರಿಯ ಮುಖಂಡರು, ನೂರಾರು ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ
ಗದಗ-ಧಾರವಾಡ ಗಡೀಲಿ ಅಕ್ರಮ ಡೀಸೆಲ್‌ ದಂಧೆ!