ಹೊಸಪೇಟೆ: ಮಾದಕ ದ್ರವ್ಯ ಸೇವನೆ ದೇಶಕ್ಕೆ ಮಾರಕವಾಗಿದೆ. ಯುವಶಕ್ತಿಗೆ ವಿರುದ್ಧವಾಗಿದ್ದು, ಯುವಕರು ಮಾದಕ ದ್ರವ್ಯ ಸೇವನೆಯಿಂದ ದೂರ ಇರಬೇಕು. ಮಾದಕ ದ್ರವ್ಯ ಸೇವನೆ ಒಂದು ದೇಶದ ಸಂಸ್ಕೃತಿಯನ್ನೇ ಕೊಲ್ಲುತ್ತದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ಅಭಿಯಾನದ ನಿಮಿತ್ತ ವಾಕ್ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ದೇಶಕ್ಕೆ ಯುವಕರೇ ಆಸ್ತಿಯಾಗಿದ್ದಾರೆ. ಮಾದಕ ದ್ರವ್ಯ ಸೇವನೆ ಮಾಡಿದರೆ ಯುವಶಕ್ತಿಯನ್ನೇ ದೇಶ ಕಳೆದುಕೊಳ್ಳಲಿದೆ. ಮೊದಲು ನಾವು ದೇಶದ ಆಸ್ತಿ ಎಂಬುದನ್ನು ಅರಿತುಕೊಳ್ಳಬೇಕು. ಬೆಂಗಳೂರಿನಲ್ಲಿ ಮಾದಕ ದ್ರವ್ಯ ಸೇವನೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದರೇ ಬೆಂಗಳೂರಿನ ಬ್ರ್ಯಾಂಡ್‌ಗೆ ಹೊಡೆತ ಬೀಳಲಿದೆ. ಮಾದಕ ದ್ರವ್ಯ ಸೇವನೆ ಆಯಾ ದೇಶದ ಸಂಸ್ಕೃತಿಗೆ ಮಾರಕವಾಗಲಿದೆ. ಹಾಗಾಗಿ ಉತ್ತಮ ಶಿಕ್ಷಣ ಪಡೆದುಕೊಂಡು ಯುವಕರು ಸದೃಢ ಸಮಾಜ ಕಟ್ಟಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀಹರಿಬಾಬು ಮಾತನಾಡಿದರು. ಎಎಸ್ಪಿ ಸಲೀಂ ಪಾಷಾ, ಆರ್‌ಟಿಒ ವಸಂತ್ ಚವ್ಹಾಣ್, ಡಿವೈಎಸ್ಪಿ ತಳವಾರ್ ಮಂಜುನಾಥ, ಪಿಐಗಳಾದ ಶ್ರೀನಿವಾಸ್ ಮೇಟಿ, ಬಾಳನಗೌಡ, ವಿಶ್ವನಾಥ ಹಿರೇಗೌಡರ, ಬೂಸರೆಡ್ಡಿ, ಶಿವರಾಜ್ ಇಂಗಳೆ ಇದ್ದರು.