ದಾಂಡೇಲಿ: ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಸ್ವಯಂ ಪ್ರೇರಿತರಾಗಿ ಮಾದಕ ವಸ್ತುಗಳ ಸೇವನೆ ವಿರೋಧಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಡಿವೈಎಸ್‌ಪಿ ಶಿವಾನಂದ ಮದರಕಂಡಿ ಹೇಳಿದರು.ಅವರು ಬುಧವಾರ ನಗರದ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಪೊಲೀಸ್ ಇಲಾಖೆಯ ಆಶ್ರಯದಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಮತ್ತು ವಿಟಿಯು ತರಬೇತಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮುಖ್ಯಅತಿಥಿಗಳಾಗಿ ಪಿಎಸ್‌ಐ ಕಿರಣ ಪಾಟೀಲ ಮಾತನಾಡಿ, ಬಹುತೇಕ ಅಪರಾಧ ಚಟುವಟಿಕೆಗಳಿಗೆ ದುಶ್ಚಟಗಳೇ ಕಾರಣವಾಗಿದೆ. ಸುಸಂಸ್ಕೃತ ನಡುವಳಿಕೆಗಳನ್ನು ಮೈಗೂಡಿಸಿಕೊಂಡಲ್ಲಿ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಿಟಿಯು ನಿರ್ದೇಶಕ ಪ್ರಸನ್ನ ರಾರಾವಿ, ವಸತಿ ನಿಲಯದ ಮೇಲ್ವಿಚಾರಕ ಚಿದಾನಂದ ಚಿಕ್ಕೊಪ್ಪ, ಎಎಸ್‌ಐ ಮೆಹಬೂಬ ನಿಂಬುವಾಲೆ, ಮನೊಹರ ಕಾನಕತ್ರಿ, ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.