ದೊಡ್ಡಬಳ್ಳಾಪುರ: ದೇಶದ ಭವಿಷ್ಯವನ್ನು ಸದೃಢವಾಗಿಸುವ ಹೊಣೆಗಾರಿಕೆ ಹೊತ್ತ ಯುವಜನರು ಮಾದಕ ವ್ಯಸನಕ್ಕೆ ದಾಸರಾಗಿ ತಮ್ಮ ಬದುಕನ್ನು ದುಸ್ತರವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಶೈಲ್ ಭೀಮಸೇನ್ ಬಾಗಡಿ ಹೇಳಿದರು.
ಸ್ವಾಮಿ ವಿವೇಕಾನಂದರು ತಮ್ಮ ಪ್ರಖರ ಚಿಂತನೆಗಳಿಂದ ಈ ದೇಶದ ಯುವಜನರನ್ನು ಪ್ರಭಾವಿಸಿದ್ದಾರೆ. ಇಂದು ದೇಶದಲ್ಲಿ ಶೇ.70ರಷ್ಟು ಯುವಜನರಿದ್ದಾರೆ. ಇದರಿಂದಾಗಿ ದೇಶ ಅತ್ಯಂತ ಸದೃಢವಾಗಿ ಮುನ್ನಡೆಯಲಿದೆ ಎಂಬ ಆಶಾಭಾವನೆ ಇದೆ. ಉತ್ಸಾಹ, ಸಾಧನೆಯ ಹಂಬಲ, ಸಮರ್ಪಣಾ ಮನೋಭಾವಗಳಿಂದ ನಾವು ಸಾಧನೆಯ ಹಾದಿಯಲ್ಲಿ ನಡೆಯುವ ಮಾರ್ಗಸೂಚಿ ನಮ್ಮ ಕಣ್ಣಮುಂದಿದೆ. ತಮ್ಮನ್ನು ತಾವು ಅರಿತುಕೊಳ್ಳುವ ಮೂಲಕ ಜಗತ್ತಿನ ಪರಮೋಚ್ಛ ಜ್ಞಾನ ತಮ್ಮದಾಗಿಸಿಕೊಳ್ಳಬಹುದು ಎಂಬ ಸಂದೇಶವನ್ನು ವಿವೇಕಾನಂದರು ಸಾರಿದರು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೆಎಂಎಫ್‌ಸಿ ಕ್ರಾಂತಿ ಕಿರಣ್ ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಕಾನೂನು ಕಟ್ಟಲೆಗಳ ಮಿತಿಯಲ್ಲೇ ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಹುಟ್ಟಿನ ಮುನ್ನವೇ ಕಾನೂನುಗಳು ವ್ಯಕ್ತಿಯನ್ನು ಆವರಿಸಲಿದ್ದು, ಮರಣಾನಂತರವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹೀಗಾಗಿ ಸರಳ, ಸಹಜ ಕಾನೂನುಗಳ ಬಗ್ಗೆ ಅರಿವು ಅತ್ಯಗತ್ಯ. ವಿವಿಧ ಹಂತಗಳಲ್ಲಿ ಸುರಕ್ಷತೆ, ಜೀವನ ಭದ್ರತೆ ಹಾಗೂ ಭರವಸೆಯನ್ನು ನೀಡುವ ಕಾನೂನು ಜ್ಞಾನದ ಬಗ್ಗೆ ಯುವಜನತೆ ಅಗತ್ಯ ಅರಿವು ಹೊಂದಬೇಕು. ವಿವೇಕಾನಂದರ ಚಿಂತನೆ ಹಾಗೂ ಆಶಯಗಳನ್ನು ಸಾಕಾರಗೊಳಿಸಬೇಕು ಎಂದರು.ದೇವರಾಜ ಅರಸು ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಸ್ವಾಮಿ ವಿವೇಕಾನಂದರ ಉದಾತ್ತ ಆಶಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಜನರು ಸನ್ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು. ದಾರಿ ತಪ್ಪುತ್ತಿರುವ ಯುವಜನರ ರೀತಿನೀತಿಗಳು ಬದಲಾಗಬೇಕು. ಅದಕ್ಕೆ ಸ್ವಾಮಿ ವಿವೇಕಾನಂದರ ತತ್ವಗಳು ಪೂರಕ ಎಂದು ಹೇಳಿದರು.
ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಹಿರಿಯ ವಕೀಲ ಮಧುಸೂದನ್, ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂಸೇವಕ ಕೃಷ್ಣಪ್ರಸಾದ್, ಲಯನ್ಸ್ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಬಾಬು ಸಾಬಿ ಮತ್ತಿತರರು ಹಾಜರಿದ್ದರು.ಫೋಟೋ-
12ಕೆಡಿಬಿಪಿ1-ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಲಯನ್ಸ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆದ ರಾಷ್ಟ್ರೀಯ ಯುವ ದಿನಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಶೈಲ್ ಭೀಮಸೇನ್ ಬಾಗಡಿ ಚಾಲನೆ ನೀಡಿದರು.
12ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಶೈಲ್ ಭೀಮಸೇನ್ ಬಾಗಡಿ ಅವರನ್ನು ಅಭಿನಂದಿಸಲಾಯಿತು.