ಕಾಲೇಜು ಪ್ರವೇಶ ವೇಳೆಯೇ ಡ್ರಗ್ಸ್‌ ಪರೀಕ್ಷೆ ಅಗತ್ಯ: ಕಮಿಷನರ್‌

KannadaprabhaNewsNetwork |  
Published : Jan 03, 2026, 03:00 AM IST
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್‌ ರೆಡ್ಡಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

‘ನಶೆ ಮುಕ್ತ ಮಂಗಳೂರು’ ಬೃಹತ್‌ ಅಭಿಯಾನದ ಉದ್ಘಾಟನಾ ಸಮಾರಂಭ

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್‌ಗಳಲ್ಲಿ ಮಾದಕ ದ್ರವ್ಯ ಪರೀಕ್ಷೆಯನ್ನು ಆರಂಭಿಸಿವೆ. ಈವರೆಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 50 ಮಂದಿ ಪಾಸಿಟಿವ್ ಆಗಿದ್ದು, ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕಾಲೇಜು ಪ್ರವೇಶದ ಸಮಯದಲ್ಲಿಯೇ ವಿದ್ಯಾರ್ಥಿಗಳ ಡ್ರಗ್ಸ್‌ ಪರೀಕ್ಷೆ ನಡೆಸಬೇಕಿದೆ ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.

ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ನಗರ ಪೊಲೀಸ್ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ‘ನಶೆ ಮುಕ್ತ ಮಂಗಳೂರು’ ಬೃಹತ್‌ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಹೆಚ್ಚಾಗಿ ಮಾದಕ ದ್ರವ್ಯಗಳ ಹಾವಳಿಗೆ ಬಲಿಯಾಗುತ್ತಿರುವವರು ವೃತ್ತಿಪರ ಕಾಲೇಜು, ಪಿಯು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು. ತಮ್ಮ ಸ್ನೇಹಿತರು ಡ್ರಗ್ಸ್‌ ಸೇವನೆ ಮಾಡುವ ಮಾಹಿತಿ ತಿಳಿದಿದ್ದೂ ವಿದ್ಯಾರ್ಥಿಗಳು ಮೂಕ ಪ್ರೇಕ್ಷಕರಾಗಿ ಉಳಿಯಬಾರದು ಎಂದು ಕಿವಿಮಾತು ಹೇಳಿದ ಕಮಿಷನರ್‌, ಡ್ರಗ್ಸ್‌ ಮಾರಾಟಗಾರರು ಮತ್ತು ಮಾದಕ ದ್ರವ್ಯಗಳ ದುರುಪಯೋಗಕ್ಕೆ ಬಲಿಯಾಗುವ ತಮ್ಮ ಸ್ನೇಹಿತರ ವಿಚಾರಗಳನ್ನು ಇಲಾಖೆ ಜತೆ ಹಂಚಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು, ವಿಶೇಷವಾಗಿ ನಡವಳಿಕೆಯ ಬದಲಾವಣೆಗಳು, ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಕುಸಿತ ಮತ್ತು ಅಸಾಮಾನ್ಯ ಖರ್ಚು ಇತ್ಯಾದಿಗಳ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚುವರಿ ಹಣ ನೀಡುವುದನ್ನು ತಪ್ಪಿಸಬೇಕು. ಜಮಾಅತ್‌ಗಳು ಸೇರಿದಂತೆ ಧಾರ್ಮಿಕ ಮುಖಂಡರು ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವ್ಯಸನದಿಂದ ಹೊರಬರಲು ಸಹಾಯ ಮಾಡಬೇಕು ಎಂದು ಹೇಳಿದರು.

ಜೈಲಲ್ಲಿ 120 ಮಂದಿ:

ಇದೀಗ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಡ್ರಗ್ಸ್‌ ವಿಚಾರದ ಕುರಿತು ಮಾಹಿತಿ ನೀಡಲು ಕ್ಯೂಆರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಕಳೆದ ಒಂದು ವಾರದಲ್ಲಿ 25 ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸಲಾಗಿದೆ. ಪ್ರಸ್ತುತ ಮಂಗಳೂರು ಜೈಲಿನಲ್ಲಿ ದಾಖಲಾಗಿರುವ ಕನಿಷ್ಠ 120 ವಿಚಾರಣಾಧೀನ ಕೈದಿಗಳು ಮಾದಕ ದ್ರವ್ಯ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಜೈಲಿನಲ್ಲಿರುವ ಸುಮಾರು ಶೇ.80 ಕೈದಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಮಾದಕ ದ್ರವ್ಯ ಮತ್ತು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ್ದಾರೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲ್ಪಟ್ಟವರು ಕನಿಷ್ಠ 10 ವರ್ಷ ಜೈಲು ಶಿಕ್ಷೆ ಎದುರಿಸುತ್ತಾರೆ ಎಂದು ಸುಧೀರ್‌ ರೆಡ್ಡಿ ಎಚ್ಚರಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ.ವಂ. ಫಾ. ಪೀಟರ್ ಪೌಲ್ ಸಲ್ಡಾನ್ಹಾ ಮಾತನಾಡಿ, ದೈವಿಕ ವಾಸ್ತವವು ನಮ್ಮ ಜೀವನದಲ್ಲಿ ಪ್ರವೇಶಿಸಿದಾಗ ವ್ಯಸನಗಳು ಮಾಯವಾಗುತ್ತವೆ. ದೇವರಿಗೆ ಸ್ಥಳಾವಕಾಶವನ್ನು ಸೃಷ್ಟಿಸಬೇಕು ಮತ್ತು ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಹೇಳಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌. ಧರ್ಮ, ರಾಮಕೃಷ್ಣ ಮಠದ ಯೋಗೇಶಾನಂದ, ಮೇಕ್‌ ಎ ಚೇಂಜ್‌ ಫೌಂಡೇಶನ್ ಅಧ್ಯಕ್ಷ ಸುಹೇಲ್ ಕಂದಕ್, ಎಸ್‌ಕೆಎಸ್‌ಎಸ್‌ಎಫ್‌ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರ್ ಅಲಿ, ಚಲನಚಿತ್ರ ನಟ ರೂಪೇಶ್‌ ಶೆಟ್ಟಿ, ವೆನ್‌ಲಾಕ್‌ ಆಸ್ಪತ್ರೆ ಮುಖ್ಯಸ್ಥ ಡಾ. ಶಿವಪ್ರಕಾಶ್‌, ಎಸ್ಸೆಸ್ಸೆಫ್‌ ರಾಜ್ಯ ಅಧ್ಯಕ್ಷ ಹಫೀಝ್‌ ಸುಫಿಯಾನ್‌, ಯುವ ಉದ್ಯಮಿ ಡಿಯೋನ್‌ ಮೊಂತೆರೊ, ಡಿಸಿಪಿಗಳಾದ ಮಿಥುನ್‌, ರವಿಶಂಕರ್‌, ಸೈಕಾಲಜಿಸ್ಟ್‌ ಡಾ. ರುಕ್ಸಾನ, ಮುಖಂಡರಾದ ನಾಸಿರ್‌ ಲಕ್ಕೀ ಸ್ಟಾರ್‌, ಅನಿಲ್‌ದಾಸ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲ ಡಿಪಿಆರ್ ನಂತೆ ಯೋಜನೆ ಅನುಷ್ಠಾನಕ್ಕೆ ಆಗ್ರಹ
ಪುಸ್ತಕ ಓದಿನಿಂದ ಕಲ್ಪನಾ ಶಕ್ತಿ ವೃದ್ಧಿ: ಡುಂಡಿರಾಜ್