ಜೂನ್‌ನಿಂದ ಡ್ರಗ್ಸ್‌ ಮುಕ್ತ, ಅಪರಾಧ ಮುಕ್ತ ಹುಬ್ಬಳ್ಳಿ ಅಭಿಯಾನ

KannadaprabhaNewsNetwork | Updated : May 18 2024, 12:38 AM IST

ಸಾರಾಂಶ

ನೇಹಾ ಮತ್ತು ಅಂಜಲಿ ಪ್ರಕರಣಗಳ ಹಿಂದೆಯ ಡ್ರಗ್ಸ್‌ ಇದೆ ಎಂಬುದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸರು ಒಂದು ಬಾರಿಯೂ 1 ಕೆಜಿ ಗಾಂಜಾ ವಶಪಡಿಸಿಕೊಂಡಿಲ್ಲ.

ಹುಬ್ಬಳ್ಳಿ:

ಹು-ಧಾ ಮಹಾನಗರದಲ್ಲಿ ಗಾಂಜಾ ಸೇರಿದಂತೆ ಇತರ ಡ್ರಗ್ಸ್‌ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಲು ಜೂನ್‌ ಮೊದಲ ವಾರದಲ್ಲಿ "ಡ್ರಗ್ಸ್‌ ಮುಕ್ತ, ಅಪರಾಧ ಮುಕ್ತ ಹುಬ್ಬಳ್ಳಿ " ಘೋಷಣೆಯ ಅಡಿ ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ಮೊದಲ ವಾರದಲ್ಲಿ ಈ ಅಭಿಯಾನವನ್ನು ಪಕ್ಷಾತೀತವಾಗಿ ಆರಂಭಿಸಲಾಗುತ್ತಿದೆ. ಎನ್‌ಜಿಒಗಳು, ಅಭಿಯಾನ ಯಶಸ್ಸಿಗೆ ಪೊಲೀಸರ ಸಹಕಾರವನ್ನೂ ಕೋರುತ್ತೇವೆ ಎಂದರು.

ನೇಹಾ ಮತ್ತು ಅಂಜಲಿ ಪ್ರಕರಣಗಳ ಹಿಂದೆಯ ಡ್ರಗ್ಸ್‌ ಇದೆ ಎಂಬುದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಪೊಲೀಸರು ಒಂದು ಬಾರಿಯೂ 1 ಕೆಜಿ ಗಾಂಜಾ ವಶಪಡಿಸಿಕೊಂಡಿಲ್ಲ. ಕೇವಲ ಕಾಟಾಚಾರಕ್ಕೆ ಪ್ರಕರಣಗಳ ದಾಖಲಿಸಿಕೊಳ್ಳುತ್ತಿದ್ದಾರೆ. ತಮಿಳುನಾಡು ಪೊಲೀಸರು ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ. ಇಲ್ಲಿಯ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಇದೆಲ್ಲವನ್ನೂ ಗಮನಿಸಿದರೆ ಡ್ರಗ್ಸ್‌ ಮಾಫಿಯಾ ಪೊಲೀಸರ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರು ನಂತರದಲ್ಲಿ ದೊಡ್ಡ ನಗರ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿಯಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಎರಡು ಕೊಲೆ ಪ್ರಕರಣಗಳು ನಡೆದರೂ ಗೃಹ ಸಚಿವ ಜಿ. ಪರಮೇಶ್ವರ ಭೇಟಿ ಮಾಡಿಲಿಲ್ಲ. ಎಡಿಜಿಪಿ ಮಟ್ಟದ ಅಧಿಕಾರಿಗಳು ನಗರಕ್ಕೆ ಬಂದು ಕಾನೂನು ಸುವ್ಯವಸ್ಥೆ ಪರಿಶೀಲಿಸಿ ಅಧಿಕಾರಿಗಳಿಗೆ ತಾಕೀತು ಮಾಡಬೇಕಿತ್ತು. ಅದನ್ನೂ ಮಾಡಲಿಲ್ಲ ಎಂದರು.

ರೌಡಿ ಶೀಟರ್‌ಗಳಿಗೆ ಪೊಲೀಸರಿಂದ ರಾಜ ಮರ್ಯಾದೆ ಸಿಗುತ್ತಿದೆ. ಪೊಲೀಸ್ ಎಂದರೆ ಭಯವಿಲ್ಲವಾಗಿದೆ. ಖಾಕಿ ಚೆನ್ನಾಗಿ ಕೆಲಸ ಮಾಡಿದರೆ ಎಲ್ಲವೂ ಸರಿಯಾಗಲಿದೆ ಎಂದರು.

ಈ ವೇಳೆ ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸಿದ್ದು ಮೊಗಲಿಶೆಟ್ಟರ, ಲಕ್ಷ್ಮೀಕಾಂತ ಘೋಡಕೆ ಸೇರಿದಂತೆ ಹಲವರಿದ್ದರು.

Share this article